ಇಚ್ಚಿಲಂಕೋಡು ಪಚ್ಚಂಪಳಂ ಮಖಾಂ ಉರೂಸ್ ನವೆಂಬರ್ 15ರಿಂದ 29ರವರೆಗೆ

ಕುಂಬಳೆ: ಇಚ್ಚಿಲಂಕೋಡು ಪಚ್ಚಂಪಳಂ ಬಾವ ಫಕೀರ್ ಮಖಾಂ ಉರೂಸ್ ನವೆಂಬರ್ 15ರಿಂದ 29ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಉರೂಸ್ ಸಮಿತಿ ಪದಾಧಿಕಾರಿಗಳು ಕುಂಬಳೆ ಪ್ರೆಸ್ ಫೋರಂನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನವೆಂಬರ್ 15ರಂದು ಭಾನುವಾರ ಸಂಜೆ 4 ಗಂಟೆಗೆ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಕುಂಬೋಳ್ ಕೆ.ಎಸ್. ಅಟ್ಟಕೋಯ ತಂಙಳ್ ಅವರ ನೇತೃತ್ವದಲ್ಲಿ ಇಚ್ಚಿಲಂಕೋಡು ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಅನ್ಸಾರ್ ಶೆರೂಲ್ ಧ್ವಜಾರೋಹಣ ನೆರವೇರಿಸಲಿದ್ದಾರೆ.

ರಾತ್ರಿ 8 ಗಂಟೆಗೆ ಕುಂಬೋಳ್ ಕೆ.ಎಸ್. ಜಅಫರ್ ಸಾದಿಕ್ ತಂಙಳ್ ಉರೂಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಯ್ಯಿದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ ಅಧ್ಯಕ್ಷತೆ ವಹಿಸಲಿದ್ದು, ಇಸ್ಮಾಯಿಲ್ ಸಖಾಫಿ ಮಖಾಂ ಝಿಯಾರತ್‌ಗೆ ನೇತೃತ್ವ ನೀಡಲಿದ್ದಾರೆ. ಜಅಫರ್ ಬುಸ್ತಾನಿ ಕುಣಿಯ ಸ್ವಾಗತಿಸಲಿದ್ದು, ಮುಹಮ್ಮದ್ ತಾಹಿರ್ ಸಖಾಫಿ ಅಲ್ ವಾರಿಸ್ ಮುಖ್ಯ ಭಾಷಣ ಮಾಡಲಿದ್ದಾರೆ. ಎ.ಕೆ.ಎಂ. ಅಶ್ರಫ್ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮುಂದಿನ ದಿನಗಳಲ್ಲಿ ಪ್ರಮುಖ ಧಾರ್ಮಿಕ ಪಂಡಿತರ ನೇತೃತ್ವದಲ್ಲಿ ಧಾರ್ಮಿಕ ಪ್ರವಚನಗಳು, ಸ್ವಲಾತ್ ಮಜ್ಲಿಸ್ ಹಾಗೂ ಆಧ್ಯಾತ್ಮಿಕ ಸಂಗಮಗಳು ನಡೆಯಲಿವೆ.

ನವೆಂಬರ್ 19ರಂದು ಸಂಜೆ 3 ಗಂಟೆಗೆ ಅಬ್ದುಲ್ ರಹ್ಮಾನ್ ಮಶ್ಹೂದ್ ಅಲ್ ಬುಖಾರಿ ಕೂರ ಅವರ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಲಿದೆ. ನವೆಂಬರ್ 26ರಂದು ಸೈನುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ ಅವರ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ಹಾಗೂ ನೂರೆ ಅಜ್ಮೀರ್ ಆಧ್ಯಾತ್ಮಿಕ ಸಂಗಮವು ವಲಿಯುದ್ದೀನ್ ಫೈಝಿ ವಾಝಕ್ಕಾಡ್ ಅವರ ನೇತೃತ್ವದಲ್ಲಿ ಜರುಗಲಿದೆ. ಕಾಸರಗೋಡು ಸಂಯುಕ್ತ ಜಮಾಅತ್ ಖಾಝಿ ಪಿ.ಪಿ. ಉಮರ್ ಮುಸ್ಲಿಯಾರ್ ಕೊಯ್ಯೋಡ್ ಧಾರ್ಮಿಕ ಪ್ರವಚನ ನೀಡಲಿದ್ದಾರೆ.

ನವೆಂಬರ್ 28ರಂದು ರಾತ್ರಿ 7 ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಅನ್ಸಾರ್ ಶೆರೂಲ್ ಅಧ್ಯಕ್ಷತೆ ವಹಿಸಲಿದ್ದು, ಪೊಯನಾಡ್ ಉಸ್ತಾದ್ ಸಾಮೂಹಿಕ ಪ್ರಾರ್ಥನೆ ನಡೆಸಲಿದ್ದಾರೆ. ಹಾಫಿಝ್ ಸಿರಾಜುದ್ದೀನ್ ಅಲ್ ಖಾಸಿಮಿ ಪತ್ತನಾಪುರಂ ಪ್ರವಚನ ನೀಡಲಿದ್ದಾರೆ.

ನವೆಂಬರ್ 29ರಂದು ಬೆಳಿಗ್ಗೆ ಸಯ್ಯಿದ್ ಕೆ.ಎಸ್. ಅಲಿ ತಂಙಳ್ ಕುಂಬೋಳ್ ಅವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಇಚ್ಚಿಲಂಕೋಡು ಮಾಲಿಕ್ ದೀನಾರ್ ಖತೀಬ್ ಜಅಫರ್ ಬುಸ್ತಾನಿ ಕುಣಿಯ, ಉರೂಸ್ ಸಮಿತಿ ಸಂಚಾಲಕ ಅಜೀಜ್ ಟಿಂಬರ್, ಇಚ್ಚಿಲಂಕೋಡು ಮಾಲಿಕ್ ದೀನಾರ್ ಜಮಾಅತ್ ಕಾರ್ಯದರ್ಶಿ ಮುಹಮ್ಮದ್ ಪೂನೆ, ಉಪಾಧ್ಯಕ್ಷ ಮೊಯ್ದೀನ್ ಕುಂಞಿ ಹಾಜಿ ಪಳ್ಳಿಕ್ಕುನ್ನು, ಖಜಾಂಚಿ ಮಜೀದ್ ಪಚ್ಚಂಪಳ ಹಾಗೂ ಪ್ರಚಾರ ಸಮಿತಿ ಸಂಚಾಲಕ ಜಸೀಲ್ ಹುಬ್ಬಳ್ಳಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!