ಕಾಸರಗೋಡು : ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವ ವಿಧ್ವಂಸಕ ಚಟುವಟಿಕೆಗಳ ವಿರುದ್ಧವಾಗಿ ಧರ್ಮಸ್ಥಳ ಕ್ಷೇತ್ರ ಭಕ್ತವೃಂದ, ಕಾಸರಗೋಡು ಇವರ ನೇತೃತ್ವದಲ್ಲಿ ನಿನ್ನೆ ಸಂಜೆ 7 : OO ಗಂಟೆಗೆ ಭವ್ಯವಾದ ಪಂಜಿನ ಮೆರವಣಿಗೆ ಕಾಸರಗೋಡು ಪಟ್ಟಣದಲ್ಲಿ ಜರಗಿತು .
ಮೆರವಣಿಗೆ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಗಿತು. ನೂರಾರು ಭಕ್ತರು, ಯುವಕರು ಹಾಗೂ ಸಾರ್ವಜನಿಕರು ದೀಪಗಳೊಂದಿಗೆ ಭಾಗವಹಿಸಿ ಸಮಗ್ರ ಏಕತೆ ಹಾಗೂ ಭಕ್ತಿ ಭಾವವನ್ನು ತೋರಿಸಿದರು. ನಗರದ ಬೀದಿಗಳಲ್ಲಿ ಮೆರವಣಿಗೆ ಸಾಗಿದಾಗ ಸ್ಥಳೀಯರು ಸಹಭಾಗಿಯಾಗಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಹಿಂದೂ ಐಕ್ಯ ವೇದಿಯ ಕಾಸರಗೋಡು ಜಿಲ್ಲಾಧ್ಯಕ್ಷ ಎಸ್.ಪಿ. ಶಾಜಿ ಅವರು ಧರ್ಮಸ್ಥಳ ಕ್ಷೇತ್ರವು ಭಕ್ತರ ಆತ್ಮಸಾಕ್ಷಿಯ ಪ್ರತೀಕವಾಗಿದ್ದು, ಇದರ ಮೇಲೆ ನಡೆಯುವ ದಾಳಿ ಭಕ್ತರ ಮನೋಭಾವದ ಮೇಲೆ ದಾಳಿ ನಡೆಸಿದಂತೆಯೇ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಧರ್ಮಸ್ಥಳ ಕ್ಷೇತ್ರವು ಶತಮಾನಗಳಿಂದ ಸಮಾಜಕ್ಕೆ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೋಧಿಸುತ್ತಿದೆ ಎಂದು ಸ್ಮರಿಸಿದರು. ಕ್ಷೇತ್ರದ ಮೇಲೆ ನಡೆಯುವ ಯಾವುದೇ ವಿಧ್ವಂಸಕ ಚಟುವಟಿಕೆಗಳನ್ನು ಯಾವುದೇ ಸಂದರ್ಭದಲ್ಲಿಯೂ ಸಹಿಸುವುದಿಲ್ಲ ಎಂಬುದನ್ನು ಘೋಷಿಸಿದರು. ಧಾರ್ಮಿಕ ಪರಂಪರೆಯ ಸಂರಕ್ಷಣೆ ಮತ್ತು ಭಕ್ತರ ಏಕತೆ ಕಾಲದ ಅವಶ್ಯಕತೆ ಎಂದು ಒತ್ತಿಹೇಳಲಾಯಿತು.
ಹಿಂದೂ ಐಕ್ಯ ವೇದಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರ್, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ಮಾವಿನಕಟ್ಟೆ, ಜಿಲ್ಲಾ ಕೋಶಾಧಿಕಾರಿ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ, ಬಿ.ಎಂ.ಎಸ್ ಜಿಲ್ಲಾ ಜತೆ ಕಾರ್ಯದರ್ಶಿ ದಿನೇಶ್ ಬಂದ್ಯೋಡು, ಹಿಂದೂ ಐಕ್ಯ ವೇದಿಯ ಜಿಲ್ಲಾ ಕಾರ್ಯಧ್ಯಕ್ಷ ಗೋಪಾಲಕೃಷ್ಣನ್ ತಚ್ಚಂಗಾಡ್, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಳ್ಳoಬೆಟ್ಟು, ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ಅಧ್ಯಕ್ಷ ಗುರು ಪ್ರಸಾದ್ ಕೋಟೆಕಣ್ಣಿ, ಕಾರ್ಯದರ್ಶಿ ಕಿಶೋರ್ ಕುಮಾರ್ ನೆಲ್ಲಿಕುಂಜೆ, ಉಪಾಧ್ಯಕ್ಷ ರಾಮಕೃಷ್ಣ ಹೊಳ್ಳ ಮುಂತಾದವರು ಮಾತನಾಡಿದರು. ವಿಶ್ವ ಹಿಂದೂ ಪರಿಷತ್ತಿನ ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಡಾ. ವೆಂಕಟ್ರಮಣ ಹೊಳ್ಳ ಸ್ವಾಗತಿಸಿ ಹಿರಿಯ ಧಾರ್ಮಿಕ ಮುಖಂಡ ಜಯಾನಂದ ಹೊಸದುರ್ಗರವರು ವಂದಿಸಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಕ್ಷೇತ್ರದ ಭಕ್ತವೃಂದ, ವಿವಿಧ ಹಿಂದೂ ಸಂಘಟನೆಗಳ ಸದಸ್ಯರು, ಮಹಿಳೆಯರು, ಯುವಕರು ಹಾಗೂ ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಂಭವನ್ನು ಭವ್ಯಗೊಳಿಸಿದರು. ಪಂಜಿನ ಮೆರವಣಿಗೆಯು ಶಾಂತ, ಸುವ್ಯವಸ್ಥಿತ ಮತ್ತು ಶ್ರದ್ಧಾಭಾವದ ವಾತಾವರಣದಲ್ಲಿ ಜರುಗಿತು.