ಮಂಜೇಶ್ವರ : ಕುಂಬಳೆ ಆರಿಕ್ಕಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗ ನಿರ್ಮಿಸುತ್ತಿರುವ ಟೋಲ್ಬೂತ್ ವಿರುದ್ಧ ಆಕ್ಷನ್ ಸಮಿತಿಯ ಬೃಹತ್ ಜನಆಂದೋಲನ ಮೆರವಣಿಗೆಯಲ್ಲಿ ಸಂಘರ್ಷ. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಕುಂಬಳೆ ಜಂಕ್ಷನ್ ನಿಂದ ಆರಂಭಗೊಂಡು ಟೋಲ್ಗೇಟ್ ಬಳಿಗೆ ತಲುಪುತಿದ್ದಂತೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆಯಿತು.
ಪರಿಸ್ಥಿತಿಯನ್ನು ನಿಯಂತ್ರಿಸಲಾಗದ ಹಿನ್ನೆಲೆಯಲ್ಲಿ ಪೊಲೀಸರು ಜಲಪೀರಂಗಿ ಪ್ರಯೋಗಿಸಿದರು. ಉದ್ರಿಕ್ತರಾದ ಪ್ರತಿಭಟನಾ ನಿರತರು ಹೆದ್ದಾರಿ ಪ್ರಾಧಿಕಾರದ ಅನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಾವಿರಾರು ಜನರು ಪಾಲ್ಗೊಂಡ ಈ ಬೃಹತ್ ಮೆರವಣಿಗೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಟೋಲ್ಗೇಟ್ ನಿರ್ಮಾಣ ನಿಲ್ಲಿಸುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಆಕ್ಷನ್ ಸಮಿತಿ ನಾಯಕರು ಘೋಷಿಸಿದ್ದಾರೆ. ಬಳಿಕ ಶಾಸಕರ ಸಹಿತ ಪ್ರತಿಭಟನಾ ನಿರತರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.