ಹೋಟೆಲೊಂದರಿಂದ ಖರೀದಿಸಲಾದ ಶವರ್ಮ ಸೇವಿಸಿ 8 ರಿಂದ 14 ರ ಮಧ್ಯೆ ಪ್ರಾಯದ 14 ಮಕ್ಕಳು ತೀವ್ರ ಅಸ್ವಸ್ಥ.

ಹೋಟೆಲೊಂದರಿಂದ ಖರೀದಿಸಲಾದ ಶವರ್ಮ ಸೇವಿಸಿ 8 ರಿಂದ 14 ರ ಮಧ್ಯೆ ಪ್ರಾಯದ 14 ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದಾರೆ.
ಪಳ್ಳಿಕ್ಕೆರೆ ಸಮೀಪದ ಪೂಚಕ್ಕಾಡಿನ ಹೋಟೆಲೊಂದರಿಂದ ಖರೀದಿಸಲಾದ ಶವರ್ಮ ಸೇವಿಸಿ ಈ ದುರ್ಘಟನೆ ಸಂಭವಿಸಿದೆ. ಇವರೆಲ್ಲರಿಗೂ ಹೊಸದುರ್ಗ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಯಿತು.

ಚಿಕಿತ್ಸೆ ಪಡೆದ ವಿದ್ಯಾರ್ಥಿಗಳು ಪಳ್ಳಿಕ್ಕೆರೆಯಲ್ಲಿ ನಡೆದ ನಬಿ ದಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳಿಗೆ ನಬಿ ದಿನ ಸಂಘಟಕರು ಆಹಾರ ಪೂರೈಸಲು ತರಿಸಲಾಗಿದ್ದ ಆಹಾರ ಸಾಕಾಗದಿದ್ದಾಗ ಸಮೀಪದ ಹೋಟೆಲೊಂದರಿಂದ ಶವರ್ಮ ಖರೀದಿಸಿ ವಿತರಿಸಿದ್ದರು.

ಅದನ್ನು ಸೇವಿಸಿದ ಅರ್ಧ ತಾಸಿನ ನಂತರ ಅವರು ತೀವ್ರ ಅಸ್ವಸ್ಥರಾಗತೊಡಗಿದರಲ್ಲದೆ ಅದರಲ್ಲೂ ಕೆಲವರಿಗೆ ವಾಂತಿಯ ಅನುಭವ ಉಂಟಾಗಿದೆ. ತಕ್ಷಣ ಬೇಕಲ ಪೊಲೀಸರು ಮತ್ತು ಪಳ್ಳಿಕ್ಕರೆ ಪಂಚಾಯತ್‌ನ ಆರೋಗ್ಯ ವಿಭಾಗಕ್ಕೆ ಮಾಹಿತಿ ನೀಡಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

ಶವರ್ಮ ಸೇವಿಸಿದ ಎಲ್ಲಾ ಮಕ್ಕಳಿಗೆ ಬಳಿಕ ರಾತ್ರಿ ಕೂಡಾ ತೀವ್ರ ದೈಹಿಕ ಅಸ್ವಸ್ಥತೆಯ ಅನುಭವ ಉಂಟಾದಾಗ ತಕ್ಷಣ ಅವರನ್ನು ಹೊಸದುರ್ಗದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದು ಅವರೆಲ್ಲಾ ಈಗ ಚೇತರಿಸತೊಡಗಿದ್ದಾರೆ.

ಶವರ್ಮ ತಯಾರಿಸಿದ ಹೋಟೆಲ್‌ಗೆ ಆಹಾರ ವಿಭಾಗದವರು ಬೀಗ ಜಡಿದಿದ್ದಾರೆ. ಅಲ್ಲಿ ತಯಾರಿಸಲಾಗಿದ್ದ ಶವರ್ಮದ ಸ್ಯಾಂಪಲನ್ನು ಸಂಗ್ರಹಿಸಿ ರಾಸಾಯನಿಕ ಪರೀಕ್ಷೆಗಾಗಿ ಕಲ್ಲಿಕೋಟೆ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಇದರ ಫಲಿತಾಂಶ ಒಂದು ವಾರದೊಳಗೆ ಲಭಿಸಲು ಸಾಧ್ಯವಿದೆಯೆಂದೂ ಅದರ ಆಧಾರದಲ್ಲಿ ಮುಂದಿನ ಅಗತ್ಯದ ಕ್ರಮ ಕೈಗೊಳ್ಳಲಾಗುವುದೆಂದು ಆಹಾರ ಸುರಕ್ಷಾ ವಿಭಾಗದ ಅಸಿಸ್ಟೆಂಟ್ ಕಮಿಷನ‌ರ್ ಹೇಳಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!