ಮಂಜೇಶ್ವರ: ಮನೆಗೆ ಬೀಗ ಹಾಕಿ ಮಸೀದಿಯ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭದಲ್ಲಿ ಮನೆಗೆ ಕಳ್ಳರು ನುಗ್ಗಿ ಹಣ ಹಾಗೂ ಚೆಕ್ ಲೀಫ್ ಕಳವುಗೈದಿರುವ ಬಗ್ಗೆ ದೂರಲಾಗಿದೆ.
ಪೆರ್ಮುದೆ ನಿವಾಸಿ ಹಾಗೂ ಗಲ್ಫ್ ಉದ್ಯೋಗಿಯಾಗಿರುವ ರಫೀಕ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ 3೦ ಸಾವಿರ ರೂಪಾಯಿ ಹಾಗೂ ಬ್ಯಾಂಕ್‌ನ ಚೆಕ್ ಲೀಫ್ ಕಳವುಗೈದಿದ್ದಾರೆ.
ಈ ಬಗ್ಗೆ ರಫೀಕ್‌ರ ಪತ್ನಿ ಶಮ್ನ ಕೆ.ಎ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಶಮ್ನ ಹಾಗೂ ಮಕ್ಕಳು ಈ ತಿಂಗಳ 8ರಂದು ಪೆರ್ಮುದೆಯ ಮಸೀದಿಯಲ್ಲಿ ನಡೆದ ನಬಿದಿನ ಕಾರ್ಯಕ್ರಮಕ್ಕೆ ತೆರಳಿದ್ದರು.
ಬಳಿಕ ಅಂದು ರಾತ್ರಿ ಅವರು ಮಸೀದಿ ಬಳಿಯ ಸಹೋದರಿಯ ಮನೆಯಲ್ಲಿ ತಂಗಿ ಮನೆಗೆ ತೆರಳಿ ಇದೀಗ ಹಿಂತಿರುಗಿದಾಗ ಮನೆಯ ಮುಂಭಾಗದ ಬಾಗಿಲು ಮುರಿದಿರುವ ಸ್ಥಿತಿಯಲ್ಲಿ ಕಂಡು ಬಂದಿದೆ. ಮನೆಯೊಳಗೆ ಪ್ರವೇಶಿಸಿ ನೋಡಿದಾಗ ಹಣ ಹಾಗೂ ಚೆಕ್ ಲೀಫ್ ಕಳವಿಗೀಡಾಗಿರುವುದು ಅರಿವಿಗೆ ಬಂದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.