ಮಂಜೇಶ್ವರ ಬಡಾಜೆ ಕಲ್ಲ ದೇವಸ್ಥಾನ ಬಳಿ ಮಂಜೇಶ್ವರ ಗ್ರಾಮ ಪಂಚಾಯತ್ ಅನುದಾನದೊಂದಿಗೆ ನಿರ್ಮಿಸಲಾದ ವನಿತಾ ತರಬೇತಿ ಕೇಂದ್ರದ ಉದ್ಘಾಟನೆ ಜರಗಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಮ್ಮದ್ ಸಿದ್ದಿಕ್ ವಹಿಸಿದ್ದರು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೋ ದೀಪ ಪ್ರಜ್ವಲನಗೈದು ಉದ್ಧಾಟಿಸಿ ಶುಭ ಹಾರೈಸಿದರು. ಸ್ಫೂರ್ತಿ ವಿದ್ಯಾನಿಕೇತನ ವಿದ್ಯಾ ಸಂಸ್ಥೆಯ ಮ್ಯಾನೇಜರ್ ಮಧುಸೂದನ ಬಳ್ಳಕ್ಕುರಾಯ, ಸಿಡಿಎಸ್ ಸದಸ್ಯೆ ಪ್ರಭಾವತಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಕುಟುಂಬಶ್ರೀ ಮಂಜೇಶ್ವರ ಚಯರ್ ಪರ್ಸನ್ ಜಯಶ್ರೀ, ಬಡಾಜೆ ಮಸೀದಿ ಅಧ್ಯಕ್ಷರಾದ ಇಬ್ರಾಹಿಂ, ಸುರಿಬೈಲು ಪಾಡ ಸೇಕರ ಸಮಿತಿ ಕಾರ್ಯದರ್ಶಿ ಕಾರ್ತಿಕರಾಜ್ ಶಿವಪುರ, ಯುವಕ ಸಂಘ (ರಿ.) ಬಡಾಜೆ ಇದರ ಅಧ್ಯಕ್ಷರಾದ ಗಣೇಶ್ ಶಿವಪುರ, ತುಂಗಾ ಕುಟುಂಬಶ್ರೀ ಅಧ್ಯಕ್ಷೆ ಹರಿಣಾಕ್ಷಿ, ಗಂಗಾ ಕುಟುಂಬಶ್ರೀ ಅಧ್ಯಕ್ಷೆ ಸುಮತಿ ಮಾಧವ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವನಿತಾ ತರಬೇತಿ ಕೇಂದ್ರಕ್ಕೆ ಅನುದಾನ ಒದಗಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ, ವಾರ್ಡು ಸದಸ್ಯರಾದ ಯಾದವ ಬಡಾಜೆ, ಬಡಾಜೆ ಅಂಗನವಾಡಿ ಶಿಕ್ಷಕಿ ವಿಶಾಲಾಕ್ಷಿ, ಗಂಗಾ ಕುಟುಂಬಶ್ರೀಯ ಹಿರಿಯ ಸದಸ್ಯರಾದ ಸುಶೀಲ, ಸುಂದರಿ ತುಂಗಾ ಕುಟುಂಬ ಶ್ರೀ ಘಟಕದ ರೇವತಿ ಅವರನ್ನು ವೇದಿಕೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು. ವಾರ್ಡು ಸದಸ್ಯರಾದ ಯಾದವ ಬಡಾಜೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇಂದಿರಾ ಸ್ಪೂರ್ತಿನಗರ ವಂದಿಸಿದರು. ಅಧ್ಯಾಪಕ ಈಶ್ವರ ಕಿದೂರು ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದ ವಿಶೇಷ ಆಕರ್ಷಣೆಯಾಗಿ ಸ್ಪೂರ್ತಿ ನಗರದಿಂದ ಸಭಾ ವೇದಿಕೆಯವರೆಗೆ ಭವ್ಯವಾದ ಘೋಷಯಾತ್ರೆಯೊಂದಿಗೆ ಅತಿಥಿ- ಗಣ್ಯರನ್ನು ವೇದಿಕೆಗೆ ಕರೆತರಲಾಯಿತು.