ಮಂಜೇಶ್ವರ ; ಯು ಡಿ ಎಫ್ ಸೀಟು ಹಂಚಿಕೆ ವಿಷಯದಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು ,ಚುನಾವಣೆಗೆ ದಿನಗಳು ಬಾಕಿ ಉಳಿದಿರುವಾಗಲೇ ರಾಜೀನಾಮೆಯ ಪರ್ವ ಪ್ರಾರಂಭಗೊಂಡಿದೆ.ಮಂಜೇಶ್ವರ ಮಂಡಲ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಸೇರಿದಂತೆ ಹಲವು ನೇತಾರರು ಮಂಗಳವಾರದಂದು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸೀಟು ಧಾರಣೆಯ ಸಂದರ್ಭದಲ್ಲಿ ಮಂಡಲ ಕಾಂಗ್ರೆಸ್ ಅಧ್ಯಕ್ಷರನ್ನು ನಯವಂಚನೆಗೊಳಪಡಿಸಿದ ಮುಸ್ಲಿಂ ಲೀಗ್ ಕೊನೆಗೆ ಮಂಜೇಶ್ವರ ಪಂಚಾಯತಿನ ಮೂರೂ ಬ್ಲಾಕ್ ಸೀಟುಗಳನ್ನು ತನ್ನದಾಗಿಸಿಕೊಂಡಿದ್ದು ಮ್ಯಾಜಿಕ್ ಎನ್ನಬಹುದು. ಮಂಜೇಶ್ವರ ಮಂಡಲ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಎಂಬವರು ಜನರಲ್ ವಿಭಾಗದ ಬಡಾಜೆ ಬ್ಲಾಕ್ ಡಿವಿಜನ್ ಅನ್ನು ಪರಿಶಿಷ್ಟ ಜಾತಿ ವಿಭಾಗದ ಮುಸ್ಲಿಂ ಲೀಗಿನ ಮಂಜೇಶ್ವರ ಡಿವಿಜನಿಗೆ ಬದಲಾವಣೆ ಮಾಡಲು ಕೈಹಾಕಿದ್ದೆ ಈ ರಾದ್ಧಾಂತಗಳಿಗೆ ಮೂಲ ಕಾರಣವೆಂಬ ಮಾತುಗಳು ಕೇಳಿ ಬರುತ್ತಿವೆ.
ಮಂಜೇಶ್ವರ ಬ್ಲಾಕ್ ಪಂಚಾಯತ್ ಡಿವಿಜನ್ ಗಳ ಹಂಚುವಿಕೆಯಲ್ಲಿ ಇದೀಗ ಭಿನ್ನಮತ ಸ್ಪೋಟಗೊಂಡಿದ್ದು ಮುಸ್ಲಿಂ ಲೀಗ್ ಈಗಾಗಲೇ ತನಗೆ ದೊರೆತ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಯಾಗಿದೆ. ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ದಲಿತ ಕಾಂಗ್ರೆಸ್ ಮುಖಂಡ ನಾಗೇಶ್ ಮಂಜೇಶ್ವರ ಮುಸ್ಲಿಂ ಲೀಗಿನ ಏಣಿ ಚಿಹ್ನೆಯಲ್ಲಿ ಸ್ಪರ್ಧಿಸುತ್ತಿರುವುದು ಕೂಡಾ ಗಮನಾರ್ಹ.