ಕಳವುಗೈದ ದ್ವಿಚಕ್ರ ವಾಹನದೊಂದಿಗೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ

​ಮಂಜೇಶ್ವರ: ಸರಣಿ ಸ್ಕೂಟರ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಸಾರ್ವಜನಿಕರೇ ಸಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ಸಂಜೆ 6 ಗಂಟೆಯ ಸುಮಾರಿಗೆ ಕುಂಜತ್ತೂರು ಸಮೀಪದ ತೂಮಿನಾಡಿನಲ್ಲಿ ನಡೆದಿದೆ.ಬಂಧಿತ ಆರೋಪಿಯನ್ನು ತಲಪಾಡಿ ನಿವಾಸಿ ಸುನಿಲ್ ಎಂದು ಗುರುತಿಸಲಾಗಿದೆ.

ಕೆಲವು ದಿನಗಳ ಹಿಂದೆ ಮಂಜೇಶ್ವರ ನಿವಾಸಿ ನಯೀಂ ಅಬ್ದುಲ್ ಖಾದರ್ ಎಂಬವರ ಕೆಎ 70 ಕೆ 4579 ನೋಂದಣಿ ಸಂಖ್ಯೆಯ ಸ್ಕೂಟರ್ ಕಳವಾಗಿತ್ತು. ಕಳವಿನ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರೂ, ಆರೋಪಿ ಹೆಲ್ಮೆಟ್ ಧರಿಸಿದ್ದರಿಂದ ಆತನನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟಸಾಧ್ಯವಾಗಿತ್ತು.ಇದೇ ವೇಳೆ ಮಂಜೇಶ್ವರ ಪೊಸೋಟು ನಿವಾಸಿಯೊಬ್ಬರ ಸ್ಕೂಟರ್ ಕೂಡ ಕಳವಾಗಿದ್ದು, ಈ ಬಗ್ಗೆಯೂ ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿತ್ತು.

​ಈ ಮಧ್ಯೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವಾಗಿದ್ದ ‘ಕೆಎ 19 ಎಚ್’ ನೋಂದಣಿ ಸಂಖ್ಯೆಯ ಸ್ಕೂಟರೊಂದು ತೂಮಿನಾಡಿನ ಅಂಗಡಿಯೊಂದರ ಮುಂಭಾಗದಲ್ಲಿ ಪತ್ತೆಯಾಗಿತ್ತು.

ಮಾಹಿತಿ ಪಡೆದ ಮಂಜೇಶ್ವರ ಪೊಲೀಸರು ಸಿವಿಲ್ ಉಡುಪಿನಲ್ಲಿ ಕಾರ್ಯಾಚರಣೆಗಿಳಿದು, ಆರೋಪಿಗಾಗಿ ಜಾಗೃತರಾಗಿ ಹೊಂಚು ಹಾಕುತ್ತಿದ್ದರು. ಆದರೆ, ಬಹಳ ಸಮಯ ಕಾದರೂ ಯಾರೂ ಬರದಿದ್ದಾಗ ಪೊಲೀಸರು ಸ್ಥಳದಿಂದ ತೆರಳಿದ್ದರು.

ಪೊಲೀಸರು ತೆರಳಿದ ತಕ್ಷಣವೇ ಆರೋಪಿ ಸ್ಕೂಟರ್ ತೆಗೆಯಲು ಬಂದಿದ್ದಾನೆ. ಈ ವೇಳೆ ಅನುಮಾನಗೊಂಡು ಜಾಗರೂಕರಾಗಿದ್ದ ಸ್ಥಳೀಯ ಊರವರು ಆತನನ್ನು ತಡೆದು ನಿಲ್ಲಿಸಿ, ವಶಕ್ಕೆ ಪಡೆದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಹಸ್ತಾಂತರಿಸಿದ್ದಾರೆ.

​ಸ್ಥಳೀಯರು ಹಾಗೂ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿ ತಾನು ತಲಪಾಡಿ ನಿವಾಸಿ ತನ್ನ ಹೆಸರು ಸುನಿಲ್ ಎಂದು ತಿಳಿಸಿದ್ದಾನೆ. ಅಲ್ಲದೆ, ನಯೀಂ ಅಬ್ದುಲ್ ಖಾದರ್ ಅವರ ಕಳವು ಮಾಡಿದ್ದ ಸ್ಕೂಟರನ್ನು ತಲಪಾಡಿಯ ಹೋಟೆಲೊಂದರ ಮುಂಭಾಗದಲ್ಲಿ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.

​ಮಂಜೇಶ್ವರ ಠಾಣೆಯ ಸಬ್ ಇನ್ಸ್‌ಪೆಕ್ಟರ್ (ಎಸ್.ಐ) ಶಬರಿ ಕೃಷ್ಣ ಅವರ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ಕಾನೂನು ಕ್ರಮ ಹಾಗೂ ಹೆಚ್ಚಿನ ವಿಚಾರಣೆ ನಡೆಸುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!