ಬದಿಯಡ್ಕದಲ್ಲಿ ಗೃಹಿಣಿ ಹತ್ಯೆ: ಕೃತ್ಯದ ಸಂಪೂರ್ಣ ವಿವರ ನೀಡಿದ ಆರೋಪಿ

ಬದಿಯಡ್ಕ:
ಕುಂಡಾಜೆ ಅಜಿಲದಲ್ಲಿ ಗೃಹಿಣಿ ಪುಷ್ಪಲತಾ ವಿ. ಶೆಟ್ಟಿ (70) ಅವರನ್ನು ಹತ್ಯೆ ಮಾಡಿ ಚಿನ್ನದ ಸರ ಕಳವು ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಡು ಕಡಿತ ಕಾರ್ಮಿಕ ಪರಮೇಶ್ವರ ಕೆ. (ರಮೇಶ್ ನಾಯ್ಕ್–48) ಅವರನ್ನು ಸಾಕ್ಷ್ಯ ಸಂಗ್ರಹಕ್ಕಾಗಿ ಕಾಸರಗೋಡು ನ್ಯಾಯಾಲಯವು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಹತ್ಯೆ ನಡೆದ ಪುಷ್ಪಲತಾ ಶೆಟ್ಟಿ ಅವರ ಮನೆಗೆ ಕರೆತಂದು ಪೊಲೀಸರು ಸ್ಥಳ ಮಹಜರು ಹಾಗೂ ಸಾಕ್ಷ್ಯ ಸಂಗ್ರಹ ನಡೆಸಿದರು.
ಹತ್ಯೆಯನ್ನು ಹೇಗೆ ನಡೆಸಿದ್ದಾನೆ ಎಂಬುದನ್ನು ಆರೋಪಿಯು ಯಾವುದೇ ಪಶ್ಚಾತ್ತಾಪವಿಲ್ಲದೆ ಪೊಲೀಸರಿಗೆ ವಿವರಿಸಿದ್ದಾನೆ ಎಂದು ತನಿಖಾ ತಂಡ ತಿಳಿಸಿದೆ. ಕೈಯಿಂದ ಕತ್ತು ನುಂಗುವ ವೇಳೆ ಪುಷ್ಪಲತಾ ಆರೋಪಿಯ ಕೈಗೆ ಕಚ್ಚಿದ್ದಳು ಎಂಬ ಮಾಹಿತಿಯನ್ನೂ ಆತ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ದಿನ ಆರೋಪಿಯು ಸಂಚರಿಸಿದ ಮಾರ್ಗಗಳು, ಭೇಟಿ ನೀಡಿದ ಸ್ಥಳಗಳು ಸೇರಿದಂತೆ ಎಲ್ಲ ಕಡೆಗಳಿಗೆ ಆರೋಪಿಯನ್ನು ಕರೆದೊಯ್ದು ಸಾಕ್ಷ್ಯ ಸಂಗ್ರಹ ಪೂರ್ಣಗೊಳಿಸಲಾಗುತ್ತಿದೆ ಎಂದು ಪ್ರಕರಣದ ತನಿಖಾಧಿಕಾರಿ ಬದಿಯಡ್ಕ ಇನ್‌ಸ್ಪೆಕ್ಟರ್ ಎ. ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಕಳವು ಮಾಡಿದ ಚಿನ್ನದ ಸರ ಈಗಾಗಲೇ ಪತ್ತೆ

ಹತ್ಯೆ ವೇಳೆ ಕಳವು ಮಾಡಿದ ಚಿನ್ನದ ಸರವನ್ನು ಆರೋಪಿಯ ಸಹಕಾರದೊಂದಿಗೆ ಪೊಲೀಸರು ಈಗಾಗಲೇ ಪತ್ತೆ ಹಚ್ಚಿದ್ದಾರೆ. ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ, ಮೂರುವರೆ ಪವನ್ ತೂಕದ ಕರಿಮಣಿ ಸರವನ್ನು ಆರೋಪಿಯ ಮನೆ ಪರಿಸರದಲ್ಲಿ ಅಡಗಿಸಿಟ್ಟಿದ್ದ ಸ್ಥಿತಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ಘಟನೆ ಹಿನ್ನೆಲೆ

ಕುಂಪಡಾಜೆ ಅಜಿಲದಲ್ಲಿ ಒಂಟಿಯಾಗಿ ವಾಸವಾಗಿದ್ದ ಪುಷ್ಪಲತಾ ಶೆಟ್ಟಿ ಅವರನ್ನು 2026ರ ಜನವರಿ 14ರಂದು ರಾತ್ರಿ ಸುಮಾರು 9.40ರ ವೇಳೆಗೆ ಮನೆಯೊಳಗೆ ಮೃತ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿತ್ತು. ನಂತರ ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆ ಎಂದು ದೃಢಪಟ್ಟಿತ್ತು.ಫಾರೆನ್ಸಿಕ್ ಶಸ್ತ್ರಚಿಕಿತ್ಸಕರ ವರದಿ ಹಾಗೂ ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆಯನ್ನು ಮುಂದುವರಿಸುತ್ತಿದ್ದಾರೆ ಎಂದು ತನಿಖಾ ತಂಡ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!