ಮಂಜೇಶ್ವರ: ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3.39 ಗ್ರಾಂ ಎಂಡಿಎಮ್‌ಎ (MDMA) ಸಾಗಾಟಕ್ಕೆ ಯತ್ನಿಸುತ್ತಿದ್ದ ಮೂವರು ಯುವಕರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಸಂಬಂಧ ಎನ್‌ಡಿಪಿಎಸ್ ಕಾಯ್ದೆಯಡಿ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾನುವಾರ ಸಂಜೆ 6.15ರ ಸುಮಾರಿಗೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪೊಸ್ಸೋಟ್–ಸತ್ಯದುಕ್ಕ–ಬಡಾಜೆ ಹಿಂದೂಸ್ತಾನ್ ಗ್ರೌಂಡ್ ಸಮೀಪ ನಡೆಸಿದ ತಪಾಸಣೆಯ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ.
KL-14 AD 9865 ಸಂಖ್ಯೆಯ ಆಟೋ ರಿಕ್ಷಾದ ಹಿಂಬದಿ ಸೀಟಿನಲ್ಲಿ ಮಾರಾಟ ಹಾಗೂ ವೈಯಕ್ತಿಕ ಬಳಕೆಗೆಂದು ಕಾನೂನುಬಾಹಿರವಾಗಿ ಸಂಗ್ರಹಿಸಿದ್ದ 3.39 ಗ್ರಾಂ ಎಂಡಿಎಮ್‌ಎ ಅನ್ನು ಪೊಲೀಸರು ಪತ್ತೆಹಚ್ಚಿದರು.
ಬಂಧಿತ ಆರೋಪಿಗಳನ್ನು ಅನ್ಸಾರ್ ಐ.ಬಿ. (36), ಸಿರಾಜುದ್ದೀನ್ (24), ಅಹ್ಮದ್ ಸೈಫುದ್ದೀನ್ (21) ಎಂದು ಗುರುತಿಸಲಾಗಿದೆ. ಎಂಡಿಎಮ್‌ಎ ಜೊತೆಗೆ KL-14 AD 9865 ಸಂಖ್ಯೆಯ ಆಟೋ ರಿಕ್ಷಾ, ಮೂರು ಮೊಬೈಲ್ ಫೋನ್‌ಗಳು, ಎರಡು ಗ್ಲಾಸ್ ಟ್ಯೂಬ್‌ಗಳು ಹಾಗೂ ಒಂದು ಲೈಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಇನ್ನೊಬ್ಬ ಆರೋಪಿಯು ಬಳಸಿದ್ದ KL-14 T 6667 ಸಂಖ್ಯೆಯ ಬುಲೆಟ್ ಮೋಟಾರ್‌ಸೈಕಲ್‌ನ್ನೂ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿದ ಈ ಪ್ರಕರಣದಲ್ಲಿ ಎನ್‌ಡಿಪಿಎಸ್ ಕಾಯ್ದೆ 1985ರ 22(ಬಿ), 29 ಸೆಕ್ಷನ್‌ಗಳ ಅಡಿಯಲ್ಲಿ ತನಿಖೆ ಆರಂಭಿಸಲಾಗಿದೆ. ಪ್ರಕರಣದ ತನಿಖೆಯನ್ನು ಮಂಜೇಶ್ವರ ಪೊಲೀಸ್ ಠಾಣೆಯ ಉಪನಿರೀಕ್ಷಕ ವೈಷ್ಣವ್ ರಾಮಚಂದ್ರನ್ ಅವರಿಗೆ ವಹಿಸಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮ್ಯಾಂಡ್ ಮಾಡಲಾಗುವುದು.