ಮಂಜೇಶ್ವರ: ಬಿರುಸಿನ ಮಳೆ ಸುರಿದು ವಿವಿಧೆಡೆಗಳಲ್ಲಿ ಹಾನಿ

ಮಂಜೇಶ್ವರ ಹೊಸಂಗಡಿ ಎಂ ಎಂ ಪ್ಲಾಜದಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಈ ಕಟ್ಟಡದ ಕೆಳಭಾಗದಲ್ಲಿರುವ ಎಲ್ಲಾ ವ್ಯಾಪಾರ ಕೇಂದ್ರಗಳು ಜಲಾವೃತಗೊಂಡಿದೆ.

ಅದೇ ರೀತಿ ಪೊಸೋಟು ರಾಷ್ಟ್ರೀಯ ಹೆದ್ದಾರಿಯ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಸಮೀಪದ ಅಂದುಞ ಎಂಬವರ ಮನೆ ಜಲಾವೃತಗೊಂಡಿದೆ. ಇದರ ಸಮೀಪದ ಎರಡು ಮನೆಗಳು ಕೂಡಾ ಜಲಾವೃತಗೊಂಡಿದೆ.

ಅದೇ ರೀತಿ ಎಡನೀರು ಸಮೀಪದ ಚೂರಿಮೂಲೆ ಎಂಬಲ್ಲಿ ತೆಂಗಿನಮರವೊಂದುದು ರಸ್ತೆಯ ಮೇಲೆ ಸಾಗುತ್ತಿದ್ದ ವಿದ್ಯುತ್ ತಂತಿಗೆ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಬದಿಯಡ್ಕ ಗ್ರಾಮಪಂಚಾಯಿತಿ 12ನೇ ವಾರ್ಡಿನಲ್ಲಿ ವಳಮಲೆಯಲ್ಲಿ ವಾಸಿಸುವ ಉದನೇಶ್ವರ ಎಂಬವರ ಮನೆಯ ಹಿತ್ತಿಲು ಕುಸಿದಿದೆ. ಅದೇ ರೀತಿ ಚೆಡೆಕ್ಕಲ್ ಎಂಬಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲಿಯೇ ನೀರುನಿಂತು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯುಂಟಾಗಿದೆ. 

ಕಳೆದೆರಡು ದಿನಗಳಿಂದ ದಿನವಿಡೀ ಬಿಟ್ಟು ಬಿಟ್ಟು ಸುರಿದ ಗಾಳಿ ಮಳೆಗೆ ವಿವಿಧೆಡೆಗಳಲ್ಲಿ ವಿದ್ಯುತ್ ಕಂಬಗಳ ಧರೆಗುರುಳಿವೆ. ಬದಿಯಡ್ಕ ಸೆಕ್ಷನ್‌ನಲ್ಲಿ ಸುಮಾರು 50ಕ್ಕಿಂತಲೂ ಹೆಚ್ಚು ಕಂಬಗಳು ಹಾಗೂ 200ರಷ್ಟು ವಿದ್ಯುತ್ ತಂತಿಗಳು ತುಂಡಾಗಿ ಬಿದ್ದ ಪರಿಣಾಮ ರಾತ್ರಿಯಿಡೀ ವಿದ್ಯುತ್  ಮೊಟಕುಗೊಂಡಿದೆ.

ರಸ್ತೆಗಳಿಗೆ ಅಡ್ಡವಾಗಿ ಬಿದ್ದ ಮರಗಳನ್ನು ತೆರವುಗೊಳಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಹಕರಿಸಿದ್ದರು. ಮಂಜೇಶ್ವರ, ಉದ್ಯಾವರ, ಬದಿಯಡ್ಕ, ಪಳ್ಳತ್ತಡ್ಕ, ನೀರ್ಚಾಲು, ಕಿಳಿಂಗಾರು, ಏತಡ್ಕ ಮೊದಲಾದ ಕಡೆಗಳಲ್ಲಿ ತೆಂಗಿನ ಮರ ಹಾಗೂ ಅಡಿಕೆ ಕೃಷಿಕರ ತೋಟದಲ್ಲಿ ಮರಗಳು ಮುರಿದು ಬಿದ್ದು ವ್ಯಾಪಕ ನಷ್ಟ ಉಂಟಾಗಿದೆ. ಕೆಲವೊಂದು ಅಡಿಕೆ ತೋಟಗಳಲ್ಲಿ 20ಕ್ಕೂ ಹೆಚ್ಚು ಮರಗಳು ಮುರಿದು ಹೋಗಿವೆ. ವಿಪರೀತ ಗಾಳಿಯಿಂದಾಗಿ ಹೆಚ್ಚಿನ ನಷ್ಟ ಉಂಟಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!