ಧರ್ಮಸ್ಥಳ ಸೇರಿದಂತೆ ಮಹಿಳೆಯರ ಮೇಲೆ ನಡೆದಿರುವ ಎಲ್ಲಾ ಪ್ರಕರಣಗಳನ್ನು ರಾಜಕೀಯ ಮುಕ್ತ SIT ತನಿಖೆಗೆ ಒತ್ತಾಯಿಸಿ ಬೆಂಗಳೂರು ಚಲೋ- ಜೆಎಂಎಸ್

ಕೂಲಿಕಾರ ,ಮಹಿಳಾ ವಿರೋಧಿ ವಿ ಬಿ ರಾಮ್ ಜಿ ಮಸೂದೆ ವಿರೋಧಿಸಿ, ಮನರೇಗಾ ಉಳಿಸಲು ಒತ್ತಾಯಿಸಿ, ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆ ಜಾರಿಗಾಗಿ, ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಿಕ ಪಿಂಚಣಿ 5000 ರೂ.ಗೆ ಹೆಚ್ಚಿಸಲು ಹಾಗೂ ಮಹಿಳೆಯರಿಗೆ ಆರ್ಥಿಕ ಸಬಲೀಕರಣ ಮತ್ತು ದೌರ್ಜನ್ಯ ಮುಕ್ತ ಬದುಕನ್ನು ಖಾತ್ರಿಗೊಳಿಸಲು, ಧರ್ಮಸ್ಥಳದಲ್ಲಿ ನಡೆದಿರುವ ಎಲ್ಲಾ ಪ್ರಕರಣಗಳನ್ನು ರಾಜಕೀಯ ಮುಕ್ತ SIT ತನಿಖೆಗೆ ಒತ್ತಾಯಿಸಿ,ಮಾರ್ಚ್.5. ರಂದು ಬೆಂಗಳೂರು ಚಲೋ ಕಾರ್ಯಕ್ರಮ ನಡೆಯಲಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಂಗಳೂರಿನಲ್ಲಿ ನಡೆದ ಜನವಾದಿ ಮಹಿಳಾ ಸಂಘಟನೆ ಪ್ರಮುಖ ಕಾರ್ಯಕರ್ತೆಯರ ಸಮಾವೇಶದಲ್ಲಿ ತಿಳಿಸಿದರು .

ಮುಂದುವರೆದು ಮಾತನಾಡುತ್ತಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳು ರಾಜ್ಯದಲ್ಲಿ ಮಹಿಳೆಯರ ಸಂಕಷ್ಟಗಳನ್ನು ತೀವ್ರಗೊಳಿಸಿದ್ದು ಮಹಿಳೆಯರ ಬದುಕಿನ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿವೆ. ಮಹಿಳೆಯರಿಗೆ ಆರ್ಥಿಕ ಸಬಲೀಕರಣ ಮತ್ತು ದೌರ್ಜನ್ಯ ಮುಕ್ತ ಬದುಕನ್ನು ಖಾತ್ರಿಗೊಳಿಸದೆ ಪರಿಪೂರ್ಣ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲವೆಂಬುದನ್ನು ಆಳುವ ಸರ್ಕಾರಗಳು ಅರ್ಥ ಮಾಡಿಕೊಂಡು ಪರಿಹಾರಗಳನ್ನು ಒದಗಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ.

ರಾಜ್ಯದಲ್ಲಿ ಮತ್ತೆ ಮತ್ತೆ ಘಟಿಸುತ್ತಿರುವ ಮರ್ಯಾದಾಗೇಡು ಹತ್ಯೆಗಳು ಮತ್ತು ಯುವಜನರ ಆಯ್ಕೆಯ ಹಕ್ಕುಗಳ ಮೇಲಿನ ದಾಳಿಗಳು ರಾಜ್ಯದಲ್ಲಿ ಪಾಳೇಗಾರಿ ಮೌಲ್ಯಗಳು, ಜಾತಿ ವ್ಯವಸ್ಥೆಯ ಪ್ರತಿಫಲನಗಳಾಗಿವೆ. ಈ ಹಿನ್ನಲೆಯಲ್ಲಿ ಮುಂಬರುವ ಅಧಿವೇಶನದಲ್ಲಿ ಮರ್ಯಾದಾಗೇಡು ಹತ್ಯೆಗಳ ತಡೆಗಾಗಿ ವಿಶೇಷ ಮಸೂದೆಯನ್ನು ಮಂಡಿಸಿ, ಅಂಗೀಕರಿಸಲು ಅಗತ್ಯ ಕ್ರಮಗಳಿಗೆ ಮುಂದಾಗಬೇಕು.ಸೌಜನ್ಯ, ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ, ಯಮುನಾ ಮುಂತಾದ ನೂರಾರು ಜನ ಸೇರಿದಂತೆ ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ, ಕೊಲೆ, ಅಸಹಜ ಸಾವುಗಳ ಕುರಿತಂತೆ ಸಮಗ್ರವಾಗಿ ಎಸ್.ಐ.ಟಿ ತನಿಖೆಯಾಗಬೇಕು. ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳು ರಾಜಕೀಯ ಮುಕ್ತ ತನಿಖೆಯನ್ನು ಖಾತ್ರಿಗೊಳಿಸಬೇಕು. ಇದರೊಂದಿಗೆ ತಳುಕು ಹಾಕಿಕೊಂಡಿರುವ ಭೂಕಬಳಿಕೆ, ಭೂ ಅಕ್ರಮಗಳು, ಧರ್ಮಸ್ಥಳ ಮೈಕ್ರೋಫೈನಾನ್ಸ್ ಸಂಸ್ಥೆಗಳ ದೌರ್ಜನ್ಯಗಳನ್ನು ಒಳಗೊಂಡಂತೆ ನಿಷ್ಪಕ್ಷಪಾತ ತನಿಖೆಯಾಗಬೇಕು.


ಮನರೇಗಾ ಕಾಯ್ದೆಯ ಸ್ಥಾನದಲ್ಲಿ ವಿಬಿ ಗ್ರಾಮ್ ಜಿ ಯೋಜನೆ ಕೋಟ್ಯಾಂತರ ಜನರ ಜೀವನಾಧಾರಗಳ ನಾಶಮಾಡುತ್ತಿದೆ.ಕೇಂದ್ರ ಸರ್ಕಾರದ ಹೊಸ ಯೋಜನೆಯ ಪ್ರಕಾರ ಕೇಂದ್ರ ಸರ್ಕಾರ ನೀಡುತ್ತಿದ್ದ ಶೇಕಡ 90 ರಷ್ಟು ಹಣದ ಪಾಲನ್ನು ಶೇಕಡ 6೦ ಕ್ಕೆ ಇಳಿಸಿ ಶೇಕಡ 40 ರಷ್ಟು ಪಾಲನ್ನು ರಾಜ್ಯ ಸರ್ಕಾರ ಭರಿಸಬೇಕೆಂದು ವಿಬಿ ಗ್ರಾಮ್ ಜಿ ಬಿಲ್‌ನಲ್ಲಿ ಹೇಳಲಾಗಿದೆ. ಅಲ್ಲದೆ ಸ್ಥಳೀಯವಾಗಿ ಜನಸಾಮಾನ್ಯರಿಗೆ ಅಗತ್ಯ ಇರುವ ಕೆಲಸವನ್ನು ಗ್ರಾಮ ಸಭೆಗಳ ಮೂಲಕ ಜನಸಾಮಾನ್ಯರೇ ತಮ್ಮ ಸ್ಥಳೀಯ ಅಗತ್ಯತೆಗೆ ಅನುಗುಣವಾಗಿ ಕೆಲಸ ಗುರುತಿಸಿ ನೀಡುತ್ತಿದ್ದುದರ ಬದಲು ಕೇಂದ್ರ ಸರ್ಕಾರವೇ ಕೆಲವು ಯೋಜನೆಗಳನ್ನು ರೂಪಿಸಿ ಕೂಲಿಕಾರರನ್ನು ಯೋಜನೆಯಿಂದ ದೂರ ಮಾಡುವ ಹುನ್ನಾರ ರೂಪಿಸಿದೆ .


ಈ ವರ್ಷದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ವಿಬಿ ಗ್ರಾಮ್ ಜಿ ಯೋಜನೆಗೆ ರೂ.95,692 ಕೋಟಿ ಹಣ ಮಾತ್ರ ಮೀಸಲಿಟ್ಟಿದೆ.MGNREGA ಯೋಜನೆಯಡಿ ಉದ್ಯೋಗ ನೀಡಿರುವ ವಾರ್ಷಿಕ ಸರಾಸರಿ ಕೇವಲ 50 ದಿನಗಳು ಮಾತ್ರ. ಇದನ್ನು ಗಮನಿಸಿದರೆ 125 ದಿನಗಳು ಕೆಲಸ ನೀಡುತ್ತೇವೆಂಬುದು ಹುಸಿ ಭರವಸೆಯಾಗಿರುತ್ತದೆ.ಬಹಳ ಮುಖ್ಯವಾಗಿ ನಿರುದ್ಯೋಗ ಭತ್ಯೆ, ತಡವಾದ ಕೂಲಿಗಾಗಿ ನೀಡಬೇಕಿರುವ ಪರಿಹಾರಗಳನ್ನು ರಾಜ್ಯ ಸರ್ಕಾರ ಭರಿಸಬೇಕೆಂದು ಹೇಳುತ್ತಿರುವುದು ರಾಜ್ಯ ಸರ್ಕಾರಗಳನ್ನು ದುರ್ಬಲಗೊಳಿಸುವ ಹುನ್ನಾರವಾಗಿದೆ.

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಾಲಕ್ಕೆ ಮಹಿಳೆಯರು ಬಲಿಯಾಗುತ್ತಿದ್ದಾರೆ. ಮೊದಲಿಗೆ ಶೇಕಡ 2.ರಷ್ಟು ಬಡ್ಡಿಯೆಂದು ಅನೇಕ ಸಂಸ್ಥೆಗಳು ಹೇಳಿ ಸಾಲ ನೀಡಿ ಕ್ರಮೇಣ ಶೇ.25ರಿಂದ 30 ರಷ್ಟು ಬಡ್ಡಿ, ಚಕ್ರ ಬಡ್ಡಿ ವಸೂಲು ಮಾಡುತ್ತಿದ್ದಾರೆ. ಒಂದು ಸಂಸ್ಥೆಯಿಂದ ಪಡೆದ ಸಾಲವನ್ನು ತೀರಿಸಲು ಮತ್ತೊಂದು ಸಂಸ್ಥೆಯಿಂದ ಸಾಲ ಪಡೆದು ಸಾಲ ಮತ್ತು ಬಡ್ಡಿ ಕಟ್ಟಲಾರದೆ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ವರದಿಯಾಗುತ್ತಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಷರತ್ತುಗಳನ್ನು ಗಾಳಿಗೆ ತೂರಿ ಅನೇಕ ಮೈಕ್ರೋ ಫೈನಾನ್ಸ್‌ಗಳು ಬಡವರ ಜೀವಗಳನ್ನು ಬಲಿಪಡೆಯುತ್ತಿದೆ. ಸಾಲ ಪಡೆಯದ ಒಂದು ಮನೆಯೂ ಇಲ್ಲದಂತಾಗಿದೆ. ಸಾಲ ವಸೂಲಿಗಾರರಿಂದ ಮಹಿಳೆಯರು ಲೈಂಗಿಕ ಆಹ್ವಾನಿಕೆಗೆ ತಲ್ಲಣಿಸಿ ಹೋಗಿದ್ದಾರೆ ಇದರಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಹೆಣ ಬಿದ್ದರೂ ಹಣ ಕಟ್ಟಬೇಕೆಂದು ಕಿರುಕುಳ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟೊಟ್ಟಿಗೆ ಹಲವಾರು ಆತ್ಮಹತ್ಯೆಗಳು ಸಾಲು ಸಾಲಾಗಿ ವರದಿಯಾದಾಗ ಕರ್ನಾಟಕ ಸರ್ಕಾರ ಮೈಕ್ರೋಫೈನಾನ್ಸ್ ಕಂಪನಿಗಳನ್ನು ನಿಯಂತ್ರಿಸುವ ಮಸೂದೆಯೊಂದನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿದೆ. ಸಮಗ್ರವಾದ ಕಾಯ್ದೆ ಇದು ಎಂದು ಹೇಳದಾದರೂ, ಲೇವಾದೇವಿ ಸಂಸ್ಥೆಗಳನ್ನು ನಿಯಂತ್ರಿಸಲು ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿರುವುದನ್ನ ಸ್ವಾಗತಿಸುತ್ತಾ ಇದನ್ನು ಸಮರ್ಪಕವಾಗಿ ಜಾರಿಗೊಳಿಸಲು ಒತ್ತಾಯಿಸುತ್ತೇವೆ.

ಎಲ್ಲ ಜೀವನಾವಶ್ಯಕ ಆಹಾರ ಪದಾರ್ಥಗಳ ಬೆಲೆಗಳು ದಿನ ದಿನವೂ ಏರುತ್ತಲೇ ಇದ್ದು ಜನರ ಆದಾಯದ ಗಣನೀಯ ಪಾಲು ಆಹಾರದ ಮೇಲೆ ವಿನಿಯೋಗಿಸಬೇಕಿದೆ. ಪಡಿತರದಾರರನ್ನು ಅತ್ಯಂತ ಅಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ. ಸರ್ಕಾರದ ಬಿ.ಪಿ.ಎಲ್ ಮಾನದಂಡಗಳು ಆಹಾರದ ಸುರಕ್ಷತೆಯನ್ನು ಖಾತ್ರಿಗೊಳಿಸುವ ಬದಲು ಜನತೆಯನ್ನು ಹೊರಗಿಡಲು ರೂಪಿಸಿದ ನಿಯಮಗಳಾಗಿವೆ. ಲಕ್ಷಾಂತರ ಬಡವರ ರೇಷನ್ ಕಾರ್ಡ್‌ಗಳನ್ನು ಸರ್ಕಾರ ರದ್ದು ಮಾಡಿದ್ದು ಅದನ್ನೇ ನಂಬಿ ಬದುಕುತ್ತಿದ್ದವರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.” ಹಸಿವು ಮುಕ್ತ ಕರ್ನಾಟಕದ’ ಘೋಷಣೆಯು ಬರಿ ಘೋಷಣೆಯಾಗಿದೆಯೆ ಹೊರತು ಆಹಾರ ಭದ್ರತೆಯ ಘೋಷಣೆಯಾಗಿಲ್ಲ.

ಈ ಹಿನ್ನಲೆಯಲ್ಲಿ ರೇಷನ್‌ಕಾರ್ಡ್ ಅಗತ್ಯವಿರುವವರು ಯಾವಾಗ ಬೇಕಾದರೂ ರೇಷನ್ ಕಾರ್ಡ್ ಪಡೆಯುವ ಪಾರದರ್ಶಕ
ಜಾರಿಗೊಳಿಸಬೇಕು .ಹಬ್ಬ ಹಾಗೂ ವಿಶೇಷ ಸಂದರ್ಭದಲ್ಲಿ ಕೇರಳ ಸರ್ಕಾರದ ಮಾದರಿಯಂತೆ ಹೆಚ್ಚುವರಿ ಆಹಾರದ ಕಿಟ್ಟನ್ನು ವಿತರಿಸಬೇಕು.ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸುವ ಸರ್ಕಾರದ ತೀರ್ಮಾನವು ಹಂತ ಹಂತವಾಗಿ ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಿಸುವ ಹುನ್ನಾರವೇ ಆಗಿದೆ. ಇದರಿಂದ ಆರೋಗ್ಯ ಸೇವೆಗಳು ಮತ್ತಷ್ಟು ದುಬಾರಿಯಾಗಲಿವೆ. ಜನವಿರೋಧಿಯಾದ ಈ ಪ್ರಸ್ತಾಪವನ್ನು ಸರ್ಕಾರ ಕೈ ಬಿಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಬಜೆಟ್ ಒದಗಿಸಿ ರಾತ್ರಿ ವೇಳೆಯೂ ಆರೋಗ್ಯ ಸೇವೆಗಳು ಸಿಗುವಂತೆ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ಸರ್ಜರಿ ಒಳಗೊಂಡಂತೆ ಇತರೆ ಎಲ್ಲಾ ಕಾಯಿಲೆಗಳಿಗೆ ಸರ್ಕಾರ ಉಚಿತವಾಗಿ ಆರೋಗ್ಯ ಸೇವೆ ನೀಡಬೇಕು.

ಬೆಲೆ ಏರಿಕೆಗೆ ಅನುಗುಣವಾಗಿ ಕಾಲ ಕಾಲಕ್ಕೆ ಪಿಂಚಣಿಗಳನ್ನು ಹೆಚ್ಚಿಸುವುದು ಸರ್ಕಾರದ ಮೂಲಭೂತ ಜವಾಬ್ದಾರಿಯಾಗಬೇಕಿತ್ತು ಆದರೆ ಸರ್ಕಾರ ಈ ಕುರಿತು ಅತ್ಯಂತ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ವೃದ್ದರು, ವಿಕಲ ಚೇತನರು, ಗಂಡ ತೀರಿಕೊಂಡ ಮಹಿಳೆಯರಿಗೆ, ಒಂಟಿ ಮಹಿಳೆಯರಿಗೆ ನೀಡುತ್ತಿರುವ ಪಿಂಚಣಿ ಏನೇನಕ್ಕೂ ಸಾಲದಾಗಿದೆ. ಈ ಹಿನ್ನಲೆಯಲ್ಲಿ ಮುಂಬರುವ ಬಜೆಟ್ ಅಧಿವೇಶನದಲ್ಲಿ ಈ ಎಲ್ಲ ವಿಭಾಗಗಳ ಪಿಂಚಣಿಯನ್ನು ಮಾಸಿಕ ರೂ.5000 ಕ್ಕೆ ಏರಿಸಬೇಕು.

ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ನ್ಯಾಯಕ್ಕಾಗಿನ ಹೋರಾಟ ಧೀರ್ಘಕಾಲಿಕ ಮತ್ತು ದುಬಾರಿಯಾಗಿದೆ. ಜಾತಿ, ರಾಜಕೀಯ ಮುಕ್ತ ತನಿಖೆಯ ಖಾತ್ರಿ ಇಲ್ಲದಂತಾಗಿದೆ. ಒಂದೊಂದು ಅತ್ಯಾಚಾರ, ದೌರ್ಜನ್ಯ ಪ್ರಕರಣದ ನ್ಯಾಯಕ್ಕಾಗಿ ವರ್ಷಗಟ್ಟಲೆ ಹೋರಾಟ ಮಾಡಬೇಕಾದಂತಹ ಸ್ಥಿತಿ ಇದೆ. ಇದು ಮಹಿಳೆಯರ ಕುರಿತ ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಈ ಹಿನ್ನಲೆಯಲ್ಲಿ ದೌರ್ಜನ್ಯಗಳ ನಿಯಂತ್ರಣಕ್ಕಾಗಿ ನ್ಯಾಯಮೂರ್ತಿ ವರ್ಮಾ ಸಮಿತಿಯ ಶಿಫಾರಸ್ಸುಗಳನ್ನು ಮತ್ತು ಕರ್ನಾಟಕ ರಾಜ್ಯದ ಉಗ್ರಪ್ಪ ಸಮಿತಿಯ ಶಿಫಾರಸ್ಸುಗಳನ್ನ ಜಾರಿಗೊಳಿಸಲು ಶೀಘ್ರ ಜಾರಿಗೊಳಿಸಲು ಒತ್ತಾಯಿಸಿ ಜಿಲ್ಲಾ ಕಾರ್ಯದರ್ಶಿ ಪ್ರಮೀಳ ದಕ್ಷಿಣ ಕನ್ನಡ ಜಿಲ್ಲೆಯಿಂದ 100 ಹೆಚ್ಚು ಮಹಿಳೆಯರು ಭಾಗವಹಿಸುವುದಾಗಿ ತಿಳಿಸಿದರು ಜಿಲ್ಲಾಧ್ಯಕ್ಷರಾದ ಕಿರಣ್ ಪ್ರಭಾ,ಮಂಗಳೂರು ನಗರ ಕಾರ್ಯದರ್ಶಿ ಅಸುಂತ ,ಮುಂತಾದವರ ಹಾಜರಿದ್ದರು.

ಹಕ್ಕೊತ್ತಾಯಗಳು

1.ವಿ.ಬಿ. ಗ್ರಾಮ್. ಜಿ ಯೋಜನೆ ಹಿಂಪಡೆಯಬೇಕು, ಮನರೇಗಾ ಉದ್ಯೋಗ ಖಾತ್ರಿ ಹಕ್ಕನ್ನು ಬಲಪಡಿಸಬೇಕು, ನಗರ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಳಿಸಬೇಕು, ದಿನಗೂಲಿ 600 ರೂ.ಗಳಿಗೆ ಹೆಚ್ಚಿಸಬೇಕು ಹಾಗೂ ವರ್ಷಕ್ಕೆ ಕನಿಷ್ಠ 200 ದಿನಗಳ ಕೆಲಸ ನೀಡಬೇಕು.

2.ಮುಂಬರುವ ಬಜೆಟ್ ಅಧಿವೇಶನದಲ್ಲಿಯೇ ಮರ್ಯಾದೆಗೇಡು ‌ಹತ್ಯೆ ‌ನಿಷೇಧ ಕಾಯ್ದೆಗಾಗಿ ಮಸೂದೆಯನ್ನು ಮಂಡಿಸಿ, ಅಂಗೀಕರಿಸಿ ಜಾರಿ ಮಾಡಬೇಕು.

3.ನ್ಯಾಯಮೂರ್ತಿ ವರ್ಮಾ ಆಯೋಗದ ಎಲ್ಲ ಶಿಫಾರಸ್ಸು ಹಾಗೂ ಕರ್ನಾಟಕ ರಾಜ್ಯದ ಉಗ್ರಪ್ಪ ಸಮಿತಿ ಶಿಫಾರಸ್ಸು ಜಾರಿ ಮಾಡಬೇಕು.

4.ಧರ್ಮಸ್ಥಳದ ಅತ್ಯಾಚಾರ, ಕೊಲೆ, ಅಸಹಜ ಸಾವು, ಭೂ ಕಬಳಿಕೆ, ಸ್ವ- ಸಹಾಯ ಸಂಘಗಳ ಮೇಲಿನ ದೌರ್ಜನ್ಯ ಸೇರಿದಂತೆ ಮೇಲಿನ ಎಲ್ಲ ಪ್ರಕರಣಗಳನ್ನು ಎಸ್.ಐ.ಟಿ. ಮೂಲಕ ಸಮಗ್ರ ತನಿಖೆಗೆ ಒಳಪಡಿಸಬೇಕು.

5.ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಕಿರುಕುಳ ತಡೆಗಟ್ಟಿ, ನಾಯಿ ಕೊಡೆಗಳಂತೆ ಹಾದಿಗೊಂದು ಬೀದಿಗೊಂದು ಹುಟ್ಟಿಕೊಂಡು ದುಬಾರಿ ಬಡ್ಡಿ ಹಾಗೂ ವಾರದ ಕಂತು ಕಟ್ಟುವಂತೆ ಕಿರುಕುಳ ನೀಡುತ್ತಿರುವ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕು.

6.ಸ್ವ-ಸಹಾಯ ಗುಂಪುಗಳಿಗೆ ಶೇ.4 ರ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲ ನೀಡಬೇಕು. ಬಡ ಕೂಲಿಕಾರ, ರೈತ ಮಹಿಳೆಯರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ
ಜಾಮೀನು ರಹಿತವಾಗಿ ಕನಿಷ್ಠ ಎರಡು ಲಕ್ಷದವರಗೆ ಸಾಲವನ್ನು ಮಂಜೂರು ಮಾಡಬೇಕು.

7.ಉದ್ಯೋಗ ಖಾತ್ರಿ ಕಾಯ್ದೆಯಲ್ಲಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ NRLM ಶೆಡ್ ನಿರ್ಮಾಣ ಮಾಡಬೇಕು. ಸಂಜೀವಿನಿ ಒಕ್ಕೂಟಕ್ಕೆ ಒಂದು ಕೋಟಿ ಹಣ ಬಿಡುಗಡೆ ಮಾಡಿ SHG ಗುಂಪುಗಳಿಗೆ ತರಬೇತಿ, ಕಚ್ಚಾ ವಸ್ತುಗಳನ್ನು ನೀಡಿ, ತಯಾರಿಸಿದ ವಸ್ತುಗಳಿಗೆ ಸರ್ಕಾರ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು.

8.ನಿವೇಶನ ರಹಿತರಿಗೆ ನಿವೇಶನ ನೀಡಿ, ವಸತಿ ನಿರ್ಮಿಸಿಕೊಳ್ಳಲು ಕನಿಷ್ಠ ಐದು ಲಕ್ಷ ಅನುದಾನ ನೀಡಬೇಕು.

9.ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುವ ಮಾಸಿಕ ವೇತನವನ್ನು ವಯಸ್ಸಿನ ಮಿತಿ ಇಲ್ಲದೆ ಒಂಟಿ ಮಹಿಳೆ, ಗಂಡ ಸತ್ತ ಮಹಿಳೆ, ಪರಿತ್ಯಕ್ತ ಮಹಿಳೆಯರು ಹಾಗೂ ವಿಕಲ ಚೇತನರಿಗೆ 5000 ರೂ. ಮಾಸಿಕ ವೇತನ ನೀಡಬೇಕು.

10.ರೇಷನ್ ಕಾರ್ಡ್ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಿ ಎಲ್ಲ ಹಳ್ಳಿಗಳಲ್ಲಿ ಪಡಿತರ ವಿತರಣ ಉಪ ಕೇಂದ್ರಗಳನ್ನ ಸ್ಥಾಪಿಸಬೇಕು.

11.ಕರ್ನಾಟಕ ರಾಜ್ಯದ ಎಲ್ಲ ಗ್ರಾಮಗಳಿಗೂ ಸಾರಿಗೆ ಸೌಲಭ್ಯ ಒದಗಿಸಬೇಕು.

12.ಸಾರ್ವಜನಿಕ ಆರೋಗ್ಯ ರಂಗವನ್ನು ಬಲಪಡಿಸಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 24 -7 ಡಾಕ್ಟರ್, ನರ್ಸ್, ಆಂಬುಲೆನ್ಸ್ ವ್ಯವಸ್ಥೆ ಇರಬೇಕು. ರಕ್ತ ಪರೀಕ್ಷೆ ಹಾಗೂ ಎಲ್ಲ ರೀತಿ ಚಿಕಿತ್ಸೆ ನೀಡುವಂತಾಗಬೇಕು.

SHARE
Loading spinner

Leave a Reply

Your email address will not be published. Required fields are marked *

error: Content is protected !!