ಮಂಗಳೂರು: ಮಂಗಳೂರಿನ ಮಣ್ಣಿನಲ್ಲಿ ಇಂದು ಅಕ್ಷರಶಃ ಭಕ್ತಿಯ ಹೊನಲು ಹರಿಯಿತು. ಕುದ್ರೋಳಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಶಿವಲಿಂಗ ಪ್ರತಿಷ್ಠಾಪಿಸಿದ ಆ ಪವಿತ್ರ ಸ್ಮರಣೆಗಾಗಿ ಹಮ್ಮಿಕೊಳ್ಳಲಾಗಿದ್ದ ‘ಕುದ್ರೋಳಿ ತೀರ್ಥಾಟನೆ’ ಕೇವಲ ಒಂದು ಪಾದಯಾತ್ರೆಯಾಗಿ ಉಳಿಯದೆ, ಸಾವಿರಾರು ಹೃದಯಗಳನ್ನು ಬೆಸೆಯುವ ಮಧುರ ಮಿಲನವಾಯಿತು.
ಸಹಸ್ರಾರು ಭಕ್ತರ ಕಂಠದಿಂದ ಹೊರಹೊಮ್ಮಿದ ಮಂತ್ರಘೋಷ, ಹಳದಿ ಸಾಗರದಂತೆ ಕಂಡ ಭಕ್ತಸಂದಣಿ—ಇವೆಲ್ಲವೂ ಮಂಗಳೂರಿನ ಬೀದಿಗಳಲ್ಲಿ ಒಂದು ಆಧ್ಯಾತ್ಮಿಕ ಕ್ರಾಂತಿಯನ್ನೇ ಸೃಷ್ಟಿಸಿತು.
ಬೆಳಗ್ಗೆ 9 ಗಂಟೆಗೆ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಯಾತ್ರೆ ಆರಂಭವಾದಾಗ, ಇಡೀ ಪರಿಸರ ಗುರುಗಳ ಜ್ಞಾನದ ಸಂಕೇತವಾದ ಹಳದಿ ಬಣ್ಣದಿಂದ ಕಂಗೊಳಿಸುತ್ತಿತ್ತು. ಅಬಾಲವೃದ್ಧರಾದಿಯಾಗಿ ಸಾವಿರಾರು ಮಂದಿ ಹಳದಿ ವಸ್ತ್ರಧಾರಿಗಳಾಗಿ ಹೆಜ್ಜೆ ಹಾಕುತ್ತಿದ್ದರೆ, ಮಂಗಳೂರಿನ ರಸ್ತೆಗಳಲ್ಲಿ ಹಳದಿ ನದಿಯೊಂದು ಮಂದಗತಿಯಲ್ಲಿ ಸಾಗುತ್ತಿರುವಂತೆ ಭಾಸವಾಗುತ್ತಿತ್ತು.
“ಓಂ ಶ್ರೀ ನಾರಾಯಣ ಪರಮ ಗುರುವೇ ನಮಃ” ಎಂಬ ಮಂತ್ರೋಚ್ಛಾರಣೆ ಆಕಾಶವನ್ನೂ ಮುಟ್ಟುವಂತಿತ್ತು. ಪ್ರತಿ ಹೆಜ್ಜೆಯಲ್ಲೂ ಭಕ್ತರ ಮುಖದಲ್ಲಿ ಒಂದು ರೀತಿಯ ದಿವ್ಯ ತೇಜಸ್ಸು ಕಾಣಿಸುತ್ತಿತ್ತು. ಇದು ಕೇವಲ ದೈಹಿಕ ನಡಿಗೆಯಾಗಿರದೆ, ಗುರುಗಳು ತೋರಿದ ಅರಿವಿನ ಹಾದಿಯಲ್ಲಿನ ಆತ್ಮಶುದ್ಧಿಯ ಪಥವಾಗಿ ಮೂಡಿಬಂತು.
ಕ್ಷೇತ್ರಾಡಳಿತ ಸಮಿತಿ, ಅಭಿವೃದ್ಧಿ ಸಮಿತಿ ಹಾಗೂ ನಾರಾಯಣಗುರು ಅನುಯಾಯಿ ಸಂಘಗಳ ಒಗ್ಗಟ್ಟು ಸಮಾಜಕ್ಕೊಂದು ಬಲವಾದ ಸಂದೇಶ ನೀಡಿತು. ಜಾತಿ-ಮತಗಳ ಬೇಧವಿಲ್ಲದೆ, “ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು” ಎಂಬ ಗುರುವಾಣಿಯನ್ನು ಎದೆಯಲ್ಲಿ ಹೊತ್ತು ಸಾಗಿದ ಭಕ್ತಸಂದಣಿ ಸಮಾಜ ಜಾಗೃತಿಯ ಸಂಕಲ್ಪವನ್ನು ಮೆರೆಯಿತು.
ಕುದ್ರೋಳಿ ಕ್ಷೇತ್ರವನ್ನು ಯಾತ್ರೆ ತಲುಪಿದಾಗ ಭಕ್ತರ ಕಣ್ಣುಗಳಲ್ಲಿ ಧನ್ಯತಾ ಭಾವ ತುಂಬಿತ್ತು. ಅಂದು ಗುರುಗಳು ನೆಟ್ಟ ಭಕ್ತಿಯ ಬೀಜ ಇಂದು ಹೆಮ್ಮರವಾಗಿ ಬೆಳೆದು ನಿಂತಿರುವುದಕ್ಕೆ ಈ ತೀರ್ಥಾಟನೆಯೇ ಸಾಕ್ಷಿಯಾಯಿತು.