ಮಂಗಳೂರು: ಸೌತ್ ಕೆನರಾ ಬೀಡಿ ವರ್ಕರ್ಸ್ ಪೆಡರೇಶನ್ ವತಿಯಿಂದ ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ನವೆಂಬರ್ 24 ರಿಂದ 27 ರ ತನಕ ಅಹೋರಾತ್ರಿ ಧರಣಿಯನ್ನು ನಗರದ ಮಿನಿ ವಿಧಾನ ಸೌಧದ ಎದುರು ನಡೆಸಲಾಗುವುದು ಇದಕ್ಕೆ ಪರಿಹಾರ ಸಿಗದೇ ಹೋದಲ್ಲಿ ನವೆಂಬರ್ 28ಕ್ಕೆ ಮಂಗಳೂರಿನ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯನ್ನು ಮುತ್ತಿಗೆ ಹಾಕಲಾಗುವುದೆಂದು ಸೌತ್ ಕೆನಾರ ಬೀಡಿ ವರ್ಕರ್ಸ್ ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿಗಳಾದ ಜೆ ಬಾಲಕೃಷ್ಣ ಶೆಟ್ಟಿ ಎಚ್ಚರಿಕೆ ನೀಡಿದರು.
ಅವರು ನಗರದ ಖಾಸಗಿ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಕರ್ನಾಟಕ ರಾಜ್ಯ ಸರ್ಕಾರ ದಿನಾಂಕ 01-04-2018 ರಂದು ಬೀಡಿ ಕಾರ್ಮಿಕರ ಕನಿಷ್ಠ ಕೂಲಿಯ ಅಧಿಸೂಚನೆಯನ್ನು ಪ್ರಕಟಿಸಿತ್ತು. ಸಾವಿರ ಬೀಡಿಗೆ ರೂಪಾಯಿ 210/- ಹಾಗೂ ಬೆಲೆ ಏರಿಕೆ ಸೂಚ್ಯಂಕದ ಪಾಯಿಂಟ್‌ಗೆ 0.04 ಪೈಸೆಯಂತೆ ತುಟ್ಟಿ ಭತ್ಯೆ ಸೇರಿಕೊಂಡು ಕನಿಷ್ಠ ಕೂಲಿಯನ್ನು ಬೀಡಿ ಮಾಲೀಕರು ಬೀಡಿ ಕಾರ್ಮಿಕರಿಗೆ ನೀಡಬೇಕಿತ್ತು. ಸರ್ವಾನುಮತದಿಂದ ಒಪ್ಪಿಕೊಂಡ ಕನಿಷ್ಠ ಕೂಲಿಯಾಗಿದ್ದರೂ ಬೀಡಿ ಮಾಲೀಕರು ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಕಳೆದ 6 ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ಕಾನೂನು ಬದ್ಧ ಕೂಲಿ ನೀಡದೆ ಮೋಸ ಮಾಡುತ್ತಾ ಬಂದಿರುತ್ತಾರೆ ಎಂದರು.
2025 ಫೆಬ್ರವರಿ ತಿಂಗಳಲ್ಲಿ ಕನಿಷ್ಠ ಕೂಲಿಯನ್ನು ಕರ್ನಾಟಕ ಸರಕಾರ ಆದಿಸೂಚನೆ ಪ್ರಕಟಿಸಿತ್ತು. ರಾಜ್ಯ ಸರ್ಕಾರ ಕನಿಷ್ಠ ಕೂಲಿ ನಿಗದಿಪಡಿಸಲು ಕನಿಷ್ಠ ಕೂಲಿ ಕಾಯ್ದೆ ಅನ್ವಯ ಸೆಕ್ಷನ್ 5(10) ಅನ್ವಯ ಸಮಿತಿಯನ್ನು ರಚಿಸಿತ್ತು .ಈ ಸಮಿತಿಯ ಬಹುಮತದ ತೀರ್ಮಾನದಂತೆ 01-04-2024 ರಿಂದ ಸಾವಿರ ಬೀಡಿಗೆ ರೂಪಾಯಿ 270/- ಕನಿಷ್ಠ ಕೂಲಿ ಮತ್ತು ಬೆಲೆ ಏರಿಕೆ ಸೂಚ್ಯಂಕ ಪಾಯಿಂಟ್ ಗೆ 0.03 ಪೈಸೆಯಂತೆ ಅಧಿಸೂಚನೆಯನ್ನು ಪ್ರಕಟಿಸಿದೆ. ಆ ಪ್ರಕಾರ ಸಾವಿರ ಬೀಡಿಗೆ ರೂಪಾಯಿ 301ರೂ-92 ಪೈಸೆ ಬೀಡಿ ಕಾರ್ಮಿಕರಿಗೆ ಮಾಲೀಕರು ವೇತನ ವಿತರಿಸ ಬೇಕು. ಆದರೆ ಬೀಡಿ ಮಾಲೀಕರು ಸಾವಿರ ಬೀಡಿಗೆ ಬರೀ ರೂಪಾಯಿ 284 -88 ರಂತೆ ನೀಡುತ್ತಿದ್ದಾರೆ ಎಂದರು.
ಕಳೆದ 8 ವರ್ಷಗಳಿಂದ CTU ಸಂಘಟನೆಯ ಮುತುವರ್ಜಿಯಲ್ಲಿ ಸ್ವತಂತ್ರ್ಯವಾಗಿ ಮತ್ತು ಜಂಟಿಯಾಗಿ ಬೀಡಿ ಕಾರ್ಮಿಕರು ಹೋರಾಟದ ಪಥದಲ್ಲಿ ಇದ್ದಾರೆ. ಮಾತ್ರವಲ್ಲದೆ ಕಾನೂನು ಪ್ರಕಾರ ಹಾಕಬೇಕಾದ ಕ್ರೈಮ್ ಅರ್ಜಿಗಳನ್ನು ಹಾಕಿ ಹೋರಾಟ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರ ತಾನೇ ಮಾಡಿದ ಕನಿಷ್ಠ ಕೂಲಿಯನ್ನು ಜಾರಿಗೊಳಿಸುವ ಯಾವುದೇ ಪ್ರಯತ್ನ ನಡೆಸುತ್ತಿಲ್ಲ. ಬೀಡಿ ಮಾಲಿಕರೊಂದಿಗೆ ಶಾಮೀಲಾಗಿ ಕಾರ್ಮಿಕರಿಗೆ ಮೋಸ ಮಾಡುತ್ತಿದೆ ಎಂದರು.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಲಕ್ಷಾಂತರ ಸಂಖ್ಯೆಯ ಬೀಡಿ ಕಾರ್ಮಿಕರು ಬೀಡಿ ಕೆಲಸವನ್ನೇ ನಂಬಿ ಬದುಕುತ್ತಿದ್ದಾರೆ. ಕನಿಷ್ಠ ರೂಪಾಯಿ 150/- ವೇತನವು ಸಿಗದೇ ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಸುಕುಮಾರ್ ತೊಕ್ಕೊಟ್ಟು , ಸದಾಶಿವ ದಾಸ್ ,ವಸಂತ ಆಚಾರಿ,ಪದ್ಮಾವತಿ ಶೆಟ್ಟಿ ಬಿಎಂ ಭಟ್ , ಸಿಐಟಿಯು ದ.ಕ.ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಉಪಸ್ಥಿತರಿದರು.