ಮಂಗಳೂರು:ಕುದ್ರೋಳಿಯ ಶ್ರೇಯಾ ಸ್ವೀಟ್ಸ್ ಎದುರಿಗಿನ ಕಟ್ಟಡದಲ್ಲಿ ಮೊಕ್ಕಾಂ ಹೂಡಿರುವ ಮಹಾರಾಷ್ಟ್ರ ಮೂಲದ ‘ವೆಕ್ಸನ್’ ಹಾಗೂ ಬಿಎಂಪಿ ಎಂಬ ಹೆಸರಿನ ನೆಟ್‌ವರ್ಕಿಂಗ್ ಸಂಸ್ಥೆಯು ಇಂಟರ್ನ್ ಶಿಪ್ ಹೆಸರಿನಲ್ಲಿ ನೂರಕ್ಕೂ ಅಧಿಕ ಅಮಾಯಕ ವಿದ್ಯಾರ್ಥಿಗಳನ್ನು ಬಲೆಗೆ ಬೀಳಿಸಿ ಲಕ್ಷಾಂತರ ರೂಪಾಯಿ ಗುಳುಂ ಮಾಡಿರುವ ಆರೋಪ ಕೇಳಿಬಂದಿದ್ದು ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸ್ವಸ್ತಿಕ ಕಾಲೇಜಿನ ವಿದ್ಯಾರ್ಥಿಗಳು ಪತ್ರಿಕಾಗೋಷ್ಠಿ ನಡೆಸಿ ಕಂಪನಿ ವಿರುದ್ಧ ಗಂಭೀರ ಆರೋಪವನ್ನು ಬಯಲಿಗೆಳಿದಿದ್ದಾರೆ .
ಚೈನ್ ಲಿಂಕ್ ಕಂಪನಿಯ ಅವ್ಯವಹಾರ ಕುರಿತು ಮಾತಾಡಿದ ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಮುಳಿಯ ಸಾತ್ವಿಕ್ ಅವರು, “ಪದವಿ ಓದುತ್ತಿರುವ ಅಥವಾ ಮುಗಿಸಿರುವ ಯುವ ಸಮೂಹಕ್ಕೆ ಮಾಸಿಕ 13, 000 ಸಾವಿರದಿಂದ 30,000 ರೂಪಾಯಿಗಳ ಆಕರ್ಷಕ ವೇತನವನ್ನು ನೀಡುವುದಾಗಿ ಆಮಿಷವನ್ನು ಒಡ್ಡಲಾಗುತ್ತದೆ.ಆಮಿಷವೊಡ್ಡಿ ಈ ಸಂಸ್ಥೆ ಆಹ್ವಾನಿಸುತ್ತಿತ್ತು. ಆದರೆ, ಉದ್ಯೋಗದ ಆಸೆಯೊಂದಿಗೆ ಹೋದ ಪ್ರತಿ ವಿದ್ಯಾರ್ಥಿಗಳಿಂದಲೂ ಇಂಟರ್ನ್ ಶಿಪ್ ಶುಲ್ಕದ ನೆಪದಲ್ಲಿ ಬರೋಬ್ಬರಿ 51,000 ರೂಪಾಯಿಗಳನ್ನು ಈ ಸಂಸ್ಥೆ ವಸೂಲಿ ಮಾಡಿದೆ” ಎಂದು ಆರೋಪಿಸಿದರು.
ಸಂಸ್ಥೆಯ ವ್ಯವಹಾರಗಳನ್ನು ಪ್ರಶ್ನಿಸಿದಾಗ ತಮಗೆ ಕಂಪೆನಿ ಮಾಡಿದ ಮೋಸ ಅರಿವಾಗಿದ್ದು, ಆ ಪೈಕಿ ಐವರು ವಿದ್ಯಾರ್ಥಿಗಳು ಹೇಗೋ ಸಾಹಸ ಮಾಡಿ ಆ ಸಂಸ್ಥೆಯ ಹಿಡಿತದಿಂದ ಹೊರಬಂದಿದ್ದಾರೆ. ಶ್ರೀನಿವಾಸ್ ಯೇನಪೋಯ ಸೇರಿದಂತೆ ಹಲವು ವಿದ್ಯಾರ್ಥಿಗಳು ಕಂಪನಿಯಿಂದ ಮೋಸ ಹೋಗಿದ್ದಾಗಿ ಆರೋಪಿಸಿದ್ದಾರೆ.ನೂರಾರು ವಿದ್ಯಾರ್ಥಿಗಳು ಈ ‘ವೆಕ್ಸನ್’ ಹಾಗೂ ಬಿಎಂಪಿ (BMP) ಕಂಪನಿಯ ಹೆಸರಿನಲ್ಲಿ ನಡೆಯುತ್ತಿದ್ದ ದಂಧೆಗೆ ಬಲಿಯಾಗಿದ್ದಾರೆ. ಮಂಗಳೂರಿನಂತಹ ಪ್ರಬುದ್ಧ ನಗರದಲ್ಲಿ ಹೊರರಾಜ್ಯದ ಕಂಪನಿಯೊಂದು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಇಂತಹ “ಚೈನ್ ಲಿಂಕ್” ಮಾಫಿಯಾ ನಡೆಸುತ್ತಿರುವುದು ತೀವ್ರ ಆತಂಕಕಾರಿ. ಹೀಗಾಗಿ ನಮಗೆ ನ್ಯಾಯ ಸಿಗಬೇಕು. ಈ ಹಿನ್ನೆಲೆಯಲ್ಲಿ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿ ರಮ್ಯಾ ಮೋಸದ ಜಾಲದ ಬಗ್ಗೆ ವಿವರಿಸುತ್ತಾ ,. ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕಿಸಿ “ಜಾಬ್” ಹೆಸರಿನಲ್ಲಿ ಕರೆಯುವ ಗುಂಪು, ಬಳಿಕ “ಬಿಸಿನೆಸ್” ಹೆಸರಿನಲ್ಲಿ ಹಣ ಹೂಡಿಕೆ ಮಾಡುವಂತೆ ಹೇಳುತ್ತಾರೆ . ಮೂರು ದಿನಗಳ ವರ್ಕ್‌ಶಾಪ್ ಮೂಲಕ ಪ್ರೇರೇಪಿಸಿ, ಟ್ರೈನಿ ಹಂತದಲ್ಲೇ ₹11,000 ಮತ್ತು ಡಿಸ್ಟ್ರಿಬ್ಯೂಟರ್ ಹಂತದಲ್ಲಿ ₹51,000 ಹೂಡಿಕೆ ಕೇಳಲಾಗುತ್ತದೆ . ದುಬಾರಿ ಮತ್ತು ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸಲು ಒತ್ತಾಯಿಸಲಾಗುತ್ತಿದೆ ಎಂದರು .
ಹೂಡಿಕೆ ಮಾಡಿದ ಹಣದಲ್ಲಿ ಹೆಚ್ಚಿನ ಭಾಗವನ್ನು ಕಂಪನಿಯ ಉತ್ಪನ್ನಗಳನ್ನು ಖರೀದಿಸಲು ಬಳಸಬೇಕಾಗುತ್ತದೆ. ಆದರೆ ಆ ಉತ್ಪನ್ನಗಳು ಮಾರುಕಟ್ಟೆ ಬೆಲೆಯಲ್ಲಿ ಹೋಲಿಸಿದರೆ ಅತೀ ದುಬಾರಿ ಹಾಗೂ ಗುಣಮಟ್ಟ ಕಡಿಮೆ ಇರುವುದಾಗಿ ಆರೋಪಿಸಲಾಗಿದೆ. ಕೆಲವು ಉತ್ಪನ್ನಗಳನ್ನು ಬಳಸಿದ ಪರಿಣಾಮ ಚರ್ಮದ ಸಮಸ್ಯೆಗಳು ಉಂಟಾಗಿದೆ ಎಂದು ಆರೋಪಿಸಿದ್ದಾರೆ .ಇದೇ ವೇಳೆ, ತರಬೇತಿ ಸಮಯದಲ್ಲಿ ಭಾಗವಹಿಸುವವರನ್ನು ಹೊರಜಗತ್ತಿನಿಂದ ದೂರವಿಟ್ಟು, ಫೋನ್ ಬಳಕೆಗೂ ಅವಕಾಶ ನೀಡದೇ, ಪೋಷಕರ ಜೊತೆ ಸಂಪರ್ಕವನ್ನೂ ನಿರ್ಬಂಧಿಸಲಾಗುತ್ತದೆ ಎಂದರು .
ಇದಲ್ಲದೆ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ವೈಯಕ್ತಿಕ ದಾಖಲೆಗಳನ್ನು ಕೂಡ ಸಂಗ್ರಹಿಸಲಾಗುತ್ತದೆ. ಹಣ ಮರುಪಾವತಿ ಮಾಡುವುದಾಗಿ ಹೇಳಿದರೂ, ನಂತರ ವಿಳಂಬ ಮಾಡಲಾಗುತ್ತದೆ ಎಂದು ಆರೋಪಿಸಿದ್ದಾರೆ .ಈ ಕೆಲಸ ಕೊಡುವ ನೆಪದಲ್ಲಿ ಹಣ ಗಳಿಸುವ ಈ ಕಂಪೆನಿಯ ಮಾಯೆಗೆ ಬಿದ್ದು ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು . ಆದರೆ ನನ್ನ ಗೆಳತಿಯರ ಸಹಾಯದಿಂದ ನಾನು ಹೂಡಿದ ಹಣ ನನಗೆ ಸಿಕ್ಕಿತ್ತು ಎಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಪ್ರೀತೇಶ್, ಸಿಂಚನ, ಸಿಂಧು, ಎನ್ ಎಸ್ ಯು ಐ ಸಂಘಟನೆಯ ಕ್ರಿಸ್ಟನ್ ಮಿನಜಸ್ ಸಹಿತ ಮುಂತಾದವರು ಉಪಸ್ಥಿತರಿದ್ದರು