ಬಂಟ್ವಾಳ: ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಎಂಬಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಮನೆಯ ಚಾವಣಿ ಕುಸಿದು ಬಿದ್ದ ಘಟನೆ ನಡೆದಿದೆ.
ಕಾಗುಡ್ಡೆ ನಿವಾಸಿ ಜಯ ಸಪಲ್ಯ ಅವರ ಮನೆಗೆ ಈ ಅನಾಹುತ ಸಂಭವಿಸಿದೆ. ಬಿರುಗಾಳಿಯ ತೀವ್ರತೆಗೆ ಮನೆಯ ಮೇಲ್ಛಾವಣಿಯ ಒಂದು ಭಾಗ ಏಕಾಏಕಿ ಕುಸಿದು ಬಿದ್ದಿದ್ದು, ಮನೆಯೊಳಗೆ ಮಳೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ವೇಳೆ ಮನೆಯ ಸದಸ್ಯರು ಒಳಗೇ ಇದ್ದರೂ, ಚಾವಣಿ ಕುಸಿಯುವ ಶಬ್ದ ಕೇಳಿ ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಿದ್ದರಿಂದ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ಇದರಿಂದ ದೊಡ್ಡ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಮನೆಮಂದಿಗೆ ನೆರವು ನೀಡಿದರು. ಮನೆಗೆ ಸಂಭವಿಸಿದ ಹಾನಿಯನ್ನು ಪರಿಶೀಲಿಸಿದ ಗ್ರಾಮಸ್ಥರು ಹಾಗೂ ಸ್ಥಳೀಯ ಮುಖಂಡರು ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿ, ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಂಟ್ವಾಳ ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆ ಮತ್ತು ಬಿರುಗಾಳಿಯಿಂದ ಹಲವು ಗ್ರಾಮಗಳಲ್ಲಿ ಮನೆಗಳು ಹಾಗೂ ಕೃಷಿ ಆಸ್ತಿಪಾಸ್ತಿಗಳಿಗೆ ಹಾನಿಯಾಗುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಹಳೆಯ ಹಾಗೂ ಶಿಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿ ವಾಸಿಸುವವರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.


