ಉಡುಪಿ: ಮನೆಯ ಬಾವಿಗೆ ಬಿದ್ದಿದ್ದ ವ್ಯಕ್ತಿಯನ್ನು ಉಡುಪಿ ಜಿಲ್ಲಾ ಅಗ್ನಿಶಾಮಕ ಸಿಬ್ಬಂದಿ ಜೀವದ ಹಂಗು ತೊರೆದು ರಕ್ಷಿಸಿದ ಘಟನೆ ಉಡುಪಿ ನಗರದಲ್ಲಿ ನಡೆದಿದೆ. ಉಡುಪಿ ನಗರದ ಸಗ್ರಿ ನಿವಾಸಿ ಜಯಕರ ನಾಯ್ಕ್ (59) ಅವರು ಮನೆಯ ಬಾವಿಯಲ್ಲಿ ಸಿಲುಕಿಕೊಂಡಿದ್ದರು. ಅಪಾರ ಮದ್ಯಪಾನದ ಚಟ ಹೊಂದಿರುವ ಜಯಕರ ನಾಯ್ಕ್ ಅವರು ಕಾಲುಜಾರಿ ಬಾವಿಗೆ ಬಿದ್ದಿರಬಹುದೆಂದು ಅಥವಾ ತಾವೇ ಹಾರಿರುವ ಸಾಧ್ಯತೆಯೂ ಇರುವುದಾಗಿ ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಅರ್ಧ ಗಂಟೆ ಕಾಲ ಹರಸಾಹಸ ನಡೆಸಿ ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಿದರು.ರಕ್ಷಣಾ ಕಾರ್ಯಾಚರಣೆಯ ಬಳಿಕ ಜಯಕರ ನಾಯ್ಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ಈ ಸಾಹಸ ಕಾರ್ಯಾಚರಣೆಗೆ ಸ್ಥಳೀಯ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಡುಪಿ ಅಗ್ನಿಶಾಮಕ ಸಿಬ್ಬಂದಿ ಈ ಹಿಂದೆಯೂ ಹಲವು ಕ್ಲಿಷ್ಟಕರ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನೆರವೇರಿಸಿರುವುದು ಗಮನಾರ್ಹವಾಗಿದೆ.