ಕಾರ್ಕಳ: ಪಳ್ಳಿ ಗ್ರಾಮದ ಕೊಡಿಮಲೆ ಪರಿಸರದಲ್ಲಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿರುವ ಅನಧಿಕೃತ ಫಿಶ್ ಮೀಲ್ ಘಟಕ ನಿರ್ಮಾಣದ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸ್ಪಂದಿಸಿದ್ದು, ನಿಯಮಬಾಹಿರವಾಗಿ ಕಾಮಗಾರಿ ನಡೆಯುತ್ತಿದ್ದರೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.
ಮಾರ್ಚ್ 6ರಂದು ಸುಮಾರು 50ಕ್ಕೂ ಹೆಚ್ಚು ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಯವರು, “ಯಾವುದೇ ಬೃಹತ್ ಕೈಗಾರಿಕೆ ಅಥವಾ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಗ್ರಾಮ ಪಂಚಾಯತ್ನ ಪೂರ್ವಾನುಮತಿ ಕಡ್ಡಾಯ. ಪಂಚಾಯತ್ ಪರವಾನಗಿ ಇಲ್ಲದೆ ನಡೆಯುವ ಯಾವುದೇ ಕಾಮಗಾರಿ ಕಾನೂನುಬಾಹಿರ,” ಎಂದು ಸ್ಪಷ್ಟಪಡಿಸಿದರು. ಈ ಕುರಿತು ತಕ್ಷಣವೇ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಅನಧಿಕೃತ ಕಟ್ಟಡಗಳ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಉಲ್ಲೇಖಿಸಿದ ಜಿಲ್ಲಾಧಿಕಾರಿಗಳು, “ಪರವಾನಗಿ ಪಡೆಯದೆ ನಿರ್ಮಾಣವಾದ ಕಟ್ಟಡಗಳನ್ನು ಸ್ಥಳೀಯ ಗ್ರಾಮ ಪಂಚಾಯತ್ ಮೂಲಕ ತೆರವುಗೊಳಿಸುವ ಅಧಿಕಾರ ಆಡಳಿತಕ್ಕಿದೆ. ಒಂದು ವೇಳೆ ಪಳ್ಳಿ ಪರಿಸರದಲ್ಲಿ ನಿಯಮ ಉಲ್ಲಂಘನೆಯಾಗಿದ್ದರೆ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲಾಗುವುದು,” ಎಂದರು.
ಪಳ್ಳಿ ಕೊಡಿಮಲೆ ಭಾಗದಲ್ಲಿ ಯಾವುದೇ ಅನುಮತಿ ಪಡೆಯದೆ ಗುಪ್ತವಾಗಿ ಫಿಶ್ ಮೀಲ್ ಘಟಕ ನಿರ್ಮಾಣವಾಗುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಘಟಕದಿಂದ ಹೊರಬರುವ ರಾಸಾಯನಿಕಯುಕ್ತ ತ್ಯಾಜ್ಯ ಮತ್ತು ದುರ್ವಾಸನೆಯಿಂದ ಸ್ಥಳೀಯ ಕೃಷಿಭೂಮಿ ಹಾಗೂ ಜಲಮೂಲಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಿವಾಸಿಗಳು ಹಾಗೂ ಶಾಲಾ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯತ್ ನೀಡಿರುವ ನೋಟಿಸ್ಗಳ ಸ್ಥಿತಿಗತಿ ಹಾಗೂ ಸಂಬಂಧಿತ ಇಲಾಖೆಗಳ ವರದಿಗಳ ಆಧಾರದ ಮೇಲೆ ಫಿಶ್ ಮೀಲ್ ಘಟಕದ ಭವಿಷ್ಯ ನಿರ್ಧಾರವಾಗಲಿದ್ದು, ಪಂಚಾಯತ್ ತೆಗೆದುಕೊಳ್ಳುವ ಮುಂದಿನ ಕ್ರಮಗಳತ್ತ ಗ್ರಾಮಸ್ಥರು ಕಣ್ಣಿಟ್ಟಿದ್ದಾರೆ.