ಮಳೆ ನಿಂತ ಬಳಿಕ ಕೊಡೆ ಹಿಡಿದಂತಾಗಿದೆ ಕಾಂಗ್ರೆಸ್ ನಾಯಕರ ಸ್ಥಳ ವೀಕ್ಷಣೆ: ಶಾಸಕ ವೇದವ್ಯಾಸ ಕಾಮತ್ ಟೀಕೆ

ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪ್ರಯತ್ನದಿಂದ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದರು.

ನಗರದ ಅಟಲ್ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರ ಇತ್ತೀಚಿನ ನಡೆಗಳನ್ನು “ಮಳೆ ನಿಂತ ಬಳಿಕ ಕೊಡೆ ಹಿಡಿದಂತಾಗಿದೆ” ಎಂಬುದಕ್ಕೆ ಹೋಲಿಸಿದರು. ಕ್ಷೇತ್ರದಲ್ಲಿ ಸಂಭವಿಸಿದ ಮಳೆ ಹಾನಿಯ ಕುರಿತು ಸಮಗ್ರ ವರದಿ ಸಲ್ಲಿಸಿ ರಾಜ್ಯ ವಿಪತ್ತು ಉಪಶಮನ ನಿಧಿ (SDMF) ಅಡಿಯಲ್ಲಿ 28 ಕಾಮಗಾರಿಗಳಿಗೆ ಅನುಮತಿ ಪಡೆಯಲಾಗಿತ್ತು. ಜಿಲ್ಲಾಧಿಕಾರಿಗಳು ಫೆಬ್ರವರಿ 16ರಂದು ಶಾಸಕರ ಪತ್ರವನ್ನು ಉಲ್ಲೇಖಿಸಿ ಅಧಿಕೃತ ಆದೇಶ ಹೊರಡಿಸಿದ್ದರು. ಆದರೆ, ಒಂದೂವರೆ ತಿಂಗಳ ನಂತರ ಎಚ್ಚೆತ್ತ ಐವನ್ ಡಿಸೋಜಾ ಸೇರಿದಂತೆ ಕಾಂಗ್ರೆಸ್ ನಾಯಕರು ಈಗ ಕ್ಷೇತ್ರದಲ್ಲಿ ಸುತ್ತಾಡಿ ಅನುದಾನ ತಂದಿದ್ದು ನಾವೇ ಎಂದು ಹೇಳಿಕೊಳ್ಳುತ್ತಿರುವುದು ಹತಾಶೆಯ ಪರಮಾವಧಿಯಾಗಿದೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿದ ಕಾಮತ್, ಕೊರೊನಾ ಸಂಕಷ್ಟದ ಕಾಲದಲ್ಲಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ 163 ಆಶಾ ಕಾರ್ಯಕರ್ತೆಯರನ್ನು ಏಕಾಏಕಿ ಕೆಲಸದಿಂದ ತೆಗೆಯಲು ಮುಂದಾಗಿರುವುದು ಖಂಡನೀಯ ಎಂದು ಹೇಳಿದರು. 15ರಿಂದ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕಾರ್ಯಕರ್ತೆಯರ ಜೀವನದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಆರೋಗ್ಯ ವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಸರ್ಕಾರಿ ವೈದ್ಯಾಧಿಕಾರಿಗಳು ಮುಷ್ಕರ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಕುಂಭಕರ್ಣ ನಿದ್ರೆಯಲ್ಲಿದೆ ಎಂದು ಟೀಕಿಸಿದರು. ಜಿಲ್ಲಾ ಉಸ್ತುವಾರಿ ಸಚಿವರೇ ಆರೋಗ್ಯ ಸಚಿವರಾಗಿದ್ದರೂ ವೈದ್ಯರ ನ್ಯಾಯಯುತ ಬೇಡಿಕೆಗಳು ಈಡೇರುತ್ತಿಲ್ಲ ಎಂದು ಹೇಳಿದರು.

ಗುತ್ತಿಗೆದಾರರ ಸುಮಾರು 37 ಸಾವಿರ ಕೋಟಿ ರೂ. ಬಾಕಿ ಬಿಲ್ ಪಾವತಿಸದೇ ರಾಜ್ಯ ಸರ್ಕಾರ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿದೆ. ಸರ್ಕಾರಕ್ಕೂ ಈ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಖಂಡನೀಯ ಎಂದು ಕಾಮತ್ ಆರೋಪಿಸಿದರು.

ಕ್ಷೇತ್ರಕ್ಕೆ ಬಂದಿರುವ ಅನುದಾನವು ಶಾಸಕರ ಅಧಿಕೃತ ಪ್ರಯತ್ನದಿಂದಲೇ ದೊರೆತಿದ್ದು, ಕಾಂಗ್ರೆಸ್ ನಾಯಕರ ಪ್ರಚಾರದಿಂದ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಮುಖಂಡರಾದ ರಮೇಶ್ ಕಂಡೆಟ್ಟು, ಪೂರ್ಣಿಮಾ, ಲಲ್ಲೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!