ತಣ್ಣೀರುಬಾವಿ ಬೀಚ್‌ನಲ್ಲಿ ಅಲ್ಟಿಮೇಟ್ ಫ್ರಿಸ್ಬಿ ನ್ಯಾಷನಲ್ಸ್: ಪಶ್ಚಿಮ ಕರಾವಳಿಯಲ್ಲಿ ಇದೇ ಮೊದಲ ಬಾರಿ

ಮಂಗಳೂರು: ಪಶ್ಚಿಮ ಕರಾವಳಿಯ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿ ಅಲ್ಟಿಮೇಟ್ ಫ್ರಿಸ್ಬಿ ಬೀಚ್ ನ್ಯಾಷನಲ್ಸ್ ರಾಷ್ಟ್ರೀಯ ಟೂರ್ನಮೆಂಟ್ ಮಂಗಳೂರಿನ ತಣ್ಣೀರುಬಾವಿ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ಮಾರ್ಚ್ 6 ರಿಂದ 8ರವರೆಗೆ ನಡೆಯಿತು. ಈ ಮೂಲಕ ತಣ್ಣೀರುಬಾವಿ ಬೀಚ್ ಈ ವಿಶಿಷ್ಟ ಕ್ರೀಡಾಕೂಟಕ್ಕೆ ಸಾಕ್ಷಿಯಾಯಿತು.

ಅಮೆರಿಕ ಮೂಲದ ಈ ಕ್ರೀಡೆ ಭಾರತದಲ್ಲಿ ಇನ್ನೂ ವ್ಯಾಪಕವಾಗಿ ಜನಪ್ರಿಯವಾಗದಿದ್ದರೂ, ಕಳೆದ ಕೆಲವು ವರ್ಷಗಳಿಂದ ನಿಧಾನವಾಗಿ ಬೆಳವಣಿಗೆ ಕಾಣುತ್ತಿದೆ. ಗುಜರಾತ್‌ನಿಂದ ಕನ್ಯಾಕುಮಾರಿವರೆಗೆ ವ್ಯಾಪಿಸಿರುವ ಪಶ್ಚಿಮ ಕರಾವಳಿಯಲ್ಲಿ ಈ ರೀತಿಯ ರಾಷ್ಟ್ರೀಯ ಮಟ್ಟದ ಟೂರ್ನಮೆಂಟ್ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ.

ಮೂರು ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು 25 ತಂಡಗಳು ಮತ್ತು 500ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು. ಸ್ಪರ್ಧೆಗಳು ಪ್ರೇಕ್ಷಕರಿಗೆ ಉತ್ಸಾಹಭರಿತ ಕ್ಷಣಗಳನ್ನು ನೀಡಿದವು.

ಅಲ್ಟಿಮೇಟ್ ಫ್ರಿಸ್ಬಿ ವೇಗ, ತಂತ್ರ ಮತ್ತು ತಂಡದ ಸಹಕಾರವನ್ನು ಒಳಗೊಂಡಿರುವ ಹೈ-ಇಂಟೆನ್ಸಿಟಿ ಕ್ರೀಡೆಯಾಗಿದೆ. ಒಂದು ತಂಡದಲ್ಲಿ ಒಟ್ಟು 15 ಆಟಗಾರರು ಇದ್ದರೂ, ಮೈದಾನದಲ್ಲಿ ಒಂದೇ ಸಮಯದಲ್ಲಿ ಪ್ರತಿ ತಂಡದಿಂದ ಐದು ಮಂದಿ ಮಾತ್ರ ಆಡುತ್ತಾರೆ.

ಗರಿಷ್ಠ 45 ನಿಮಿಷಗಳ ಕಾಲ ನಡೆಯುವ ಪಂದ್ಯದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ತಂಡ ಗೆಲುವು ಸಾಧಿಸುತ್ತದೆ. ಆದರೆ ಸಮಯ ಮುಗಿಯುವ ಮೊದಲು ಯಾವುದಾದರೂ ತಂಡ 13 ಅಂಕಗಳನ್ನು ಗಳಿಸಿದರೆ ಆ ತಂಡವನ್ನು ತಕ್ಷಣವೇ ವಿಜಯಿಯಾಗಿ ಘೋಷಿಸಲಾಗುತ್ತದೆ.

ಈ ಕ್ರೀಡೆಯ ಮತ್ತೊಂದು ವಿಶೇಷತೆ ಎಂದರೆ ಇಲ್ಲಿ ರೆಫ್ರಿ ಅಥವಾ ಅಂಪೈರ್‌ಗಳಿಲ್ಲ. ಆಟಗಾರರು ತಾವೇ ನಿಯಮಗಳನ್ನು ಪಾಲಿಸಿಕೊಂಡು ಕ್ರೀಡೆಯನ್ನು ಮುಂದುವರಿಸುವುದು ಇದರ ವಿಶಿಷ್ಟತೆಯಾಗಿದ್ದು, ‘ಸ್ಪಿರಿಟ್ ಆಫ್ ದ ಗೇಮ್’ ಎಂಬ ತತ್ವವನ್ನು ಈ ಕ್ರೀಡೆ ಪ್ರತಿಬಿಂಬಿಸುತ್ತದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!