ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ 3ನೇ ವಾರ್ಡ್ ವ್ಯಾಪ್ತಿಯ ಕುಂಜತ್ತೂರು ಸರ್ವೀಸ್ ರಸ್ತೆಯಲ್ಲಿ ದುರ್ನಾಥ ಬೀರುತ್ತಿದ್ದ ತ್ಯಾಜ್ಯವನ್ನು ವಾರ್ಡ್ ಸದಸ್ಯೆ ಹಸೀನಾ ಹನೀಫ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ಶುಚಿಗೊಳಿಸಲಾಗಿತ್ತು. ಅಲ್ಲದೆ, ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಬಿಸಾಡಿದರೆ ದಂಡ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಲಾಗಿತ್ತು.

ಆದರೆ, ನೈರ್ಮಲ್ಯ ಕಾರ್ಯ ನಡೆದ ಮರುದಿನವೇ ಸಮೀಪದ ಫ್ಲ್ಯಾಟ್ವೊಂದರ ನಿವಾಸಿಯೊಬ್ಬ ಓಡೋಡಿ ಬಂದು ಅದೇ ಜಾಗದಲ್ಲಿ ತ್ಯಾಜ್ಯ ಎಸೆಯುತ್ತಿರುವ ದೃಶ್ಯ ಸಿಒಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವ್ಯಕ್ತಿಯ ಗುರುತು ಬಹುತೇಕ ಖಚಿತಗೊಂಡಿದ್ದು, ಪಂಚಾಯತ್ ಅಧಿಕಾರಿಗಳು ಹಾಗೂ ವಾರ್ಡ್ ಸದಸ್ಯರು ಆತನ ವಿರುದ್ಧ ದಂಡ ವಿಧಿಸುವುದು ಸೇರಿದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲು ನಿರ್ಧರಿಸಿದ್ದಾರೆ. ಪರಿಸರದ ನೈರ್ಮಲ್ಯ ಕಾಪಾಡುವಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಈ ಮೂಲಕ ಮನವಿ ಮಾಡಲಾಗಿದೆ.


