ಕುಂಬಳೆ: ಕಾರಿನಲ್ಲಿ ಅಕ್ರಮವಾಗಿ ವಿವಿಧ ರೀತಿಯ ಪಾನ್ ಮಸಾಲಾ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಯುವಕನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೊಹಮ್ಮದ್ ಶಫೀರ್ (27) ಎಂದು ಗುರುತಿಸಲಾಗಿದೆ. ಇವರು ಕಾಸರಗೋಡು ಮುತ್ತತ್ತೋಡಿ ಚೆಟ್ಟುಕುಝಿ ಸಿಎ ಅಪಾರ್ಟ್‌ಮೆಂಟ್ ನಿವಾಸಿಯಾಗಿದ್ದು, ಮೂಲತಃ ನಾರ್ತ್ ತ್ರಿಕ್ಕರಿಪ್ಪೂರು ಮೀಲಿಯಾಟ್ ಹೌಸ್‌ನವರು ಎಂದು ತಿಳಿದುಬಂದಿದೆ.
ನಿನ್ನೆ ಸಂಜೆ ಶಿರಿಯಾ ಸೇತುವೆ ಸಮೀಪ ವಾಹನ ತಪಾಸಣೆ ನಡೆಸುವ ವೇಳೆ ಈ ಬಂಧನ ನಡೆದಿದೆ. KL 24 K 4300 ಸಂಖ್ಯೆಯ ಕಾರನ್ನು ಚಲಾಯಿಸುತ್ತಿದ್ದ ಶಫೀರ್‌ಗೆ ಪೊಲೀಸರು ನಿಲ್ಲಲು ಸೂಚಿಸಿದಾಗ ಕಾರನ್ನು ನಿಲ್ಲಿಸಿದರು. ಪೊಲೀಸರು ಕಾರಿನತ್ತ ಸಾಗುತ್ತಿದ್ದಂತೆ ಶಫೀರ್ ಕಾರಿನಿಂದ ಇಳಿದು ಓಡಿ ಹೋಗಲು ಯತ್ನಿಸಿದರೂ, ಪೊಲೀಸರು ತಕ್ಷಣವೇ ಅವರನ್ನು ಹಿಡಿದು ವಶಕ್ಕೆ ಪಡೆದರು.
ಕಾರಿನಲ್ಲಿ ನಡೆಸಿದ ತಪಾಸಣೆಯಲ್ಲಿ ವಿವಿಧ ರೀತಿಯ ಪಾನ್ ಮಸಾಲಾ ಮತ್ತು ತಂಬಾಕು ಉತ್ಪನ್ನಗಳ ಒಟ್ಟು 17,226 ಪ್ಯಾಕೆಟ್‌ಗಳು ಪತ್ತೆಯಾಗಿವೆ. ಇದರಲ್ಲಿ
- 7,500 ಪ್ಯಾಕೆಟ್ ಹಾನ್ಸ್ ಚಿಪ್,
- 3,150 ಪ್ಯಾಕೆಟ್ ಕೂಲ್ ಲಿಪ್,
- 5,016 ಪ್ಯಾಕೆಟ್ ವಿಮಲ್ ಪಾನ್ ಮಸಾಲಾ,
- 440 ಪ್ಯಾಕೆಟ್ ವಿ-ವನ್ ಟುಬಾಕೊ,
- 560 ಪ್ಯಾಕೆಟ್ ಶಿಕ್ಕಾರ್,
- 560 ಪ್ಯಾಕೆಟ್ ಎಸ್‌ಎಸ್‌ಐ ಟುಬಾಕೊ ಸೇರಿವೆ.
ಇನ್‌ಸ್ಪೆಕ್ಟರ್ ಬೈಜು ಕೆ. ಜೋಸ್ ಅವರಿಗೆ ಲಭಿಸಿದ ಗುಪ್ತ ಮಾಹಿತಿಯ ಆಧಾರದಲ್ಲಿ ಎಸ್‌ಐಗಳಾದ ಶ್ರೀಜೇಶ್, ಅನಂತಕೃಷ್ಣನ್ ಹಾಗೂ ಸುಮೇಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತಂಬಾಕು ಉತ್ಪನ್ನಗಳು, ಆರೋಪಿಯನ್ನು ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.