ದೈವಜ್ಞರು ಬದುಕಿನ ದಾರಿದೀಪವೋ ಅಥವಾ ವಿಧಿಯ ವ್ಯಾಪಾರಿಗಳೋ?

​ಭಾರತೀಯ ಪರಂಪರೆಯಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ‘ವೇದಚಕ್ಷು’ ಎಂದು ಗೌರವಿಸಲಾಗುತ್ತದೆ. ಅಂದರೆ, ಅಜ್ಞಾನದ ಕತ್ತಲೆಯಲ್ಲಿ ದಾರಿ ಕಾಣದೆ ತಡಕಾಡುವ ಮನುಷ್ಯನಿಗೆ ಕಾಲದ ಗತಿಯನ್ನು ತೋರಿಸುವ ದಿವ್ಯ ದೃಷ್ಟಿ ಇದು. ಆದರೆ ಇಂದು ಸ್ವರ್ಣ ಪ್ರಶ್ನೆ, ಪ್ರೇತ ಚಿಂತನೆ ಮತ್ತು ದೋಷ ಪರಿಹಾರಗಳೆಂಬ ಪವಿತ್ರ ಶಬ್ದಗಳು ಭಕ್ತಿಯ ಹಾದಿಗಿಂತ ಹೆಚ್ಚಾಗಿ ಲಾಭದಾಯಕ ವ್ಯಾಪಾರದ ಸಂಕೇತಗಳಾಗಿ ಬದಲಾಗುತ್ತಿರುವುದು ಒಂದು ಸಾಮಾಜಿಕ ದುರಂತವೇ ಸರಿ.

​ಅನಿಶ್ಚಿತತೆಯ ಮೇಲೆ ಕುದುರುವ ವ್ಯಾಪಾರ

​ಒಬ್ಬ ನೈಜ ದೈವಜ್ಞನು ವ್ಯಕ್ತಿಯ ಜಾತಕದಲ್ಲಿರುವ ದೋಷಗಳನ್ನು ಕಂಡು ಅವರನ್ನು ಹೆದರಿಸುವ ಬದಲು, ಆ ಅನಿವಾರ್ಯ ಪರಿಸ್ಥಿತಿಯನ್ನು ಎದುರಿಸಲು ಬೇಕಾದ ಮನೋಬಲವನ್ನು ತುಂಬಬೇಕು. ಆದರೆ ಇಂದಿನ ಕರಾಳ ವಾಸ್ತವವೇ ಬೇರೆಯಿದೆ. ಅನೇಕರು ಜ್ಯೋತಿಷ್ಯವನ್ನು ಭವಿಷ್ಯ ದರ್ಶನದ ಕಲೆಯನ್ನಾಗಿ ಬಳಸುವ ಬದಲು, ಜನರಲ್ಲಿ ಭಯ ಹುಟ್ಟಿಸುವ ತಂತ್ರವನ್ನಾಗಿ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಪ್ರೇತವಿದೆ ಅಥವಾ ವಂಶಕ್ಕೆ ಶಾಪವಿದೆ ಎಂಬ ಭೀಕರ ಚಿತ್ರಣ ನೀಡಿ, ಲಕ್ಷಾಂತರ ರೂಪಾಯಿಗಳ ಪರಿಹಾರದ ವ್ಯಾಪಾರ ಕುದುರಿಸುವುದು ದೈವಜ್ಞನ ಲಕ್ಷಣವಲ್ಲ.

​ದೇವಾಲಯಗಳ ಅಸ್ತಿತ್ವಕ್ಕೇ ಸಂಚಕಾರ: ಹೊಸದೊಂದು ‘ದಂಧೆ’

​ಇತ್ತೀಚಿನ ದಿನಗಳಲ್ಲಿ ಕಾಣಸಿಗುವ ಮತ್ತೊಂದು ಆಘಾತಕಾರಿ ಬೆಳವಣಿಗೆಯೆಂದರೆ ದೇವಸ್ಥಾನಗಳ ‘ಮೂಲ ಸ್ವರೂಪ’ದ ಕುರಿತು ಹುಟ್ಟುಹಾಕುವ ಗೊಂದಲಗಳು. ತಲೆತಲಾಂತರಗಳಿಂದ ಒಂದು ನಿರ್ದಿಷ್ಟ ದೈವ ಅಥವಾ ದೇವರನ್ನು ನಂಬಿ ಪೂಜಿಸುತ್ತಾ ಬಂದ ಭಕ್ತರಿಗೆ, ದೈವಜ್ಞನೊಬ್ಬ ಬಂದು “ನೀವು ಪೂಜಿಸುತ್ತಿರುವುದು ಈ ದೇವರನ್ನಲ್ಲ, ಇಲ್ಲಿರುವುದು ಬೇರೆ ಶಕ್ತಿ” ಎಂದು ಹೇಳಿದಾಗ ಆಸ್ತಿಕರ ಮನಸ್ಸು ಚೂರಾಗುತ್ತದೆ.

​ಉದಾಹರಣೆಗೆ: ದಶಕಗಳಿಂದ ಗೋಪಾಲಕೃಷ್ಣನಾಗಿ ಪೂಜಿಸಲ್ಪಡುವ ವಿಗ್ರಹವನ್ನು ಸಡನ್ ಆಗಿ ‘ಮಹಾವಿಷ್ಣು’ ಎಂದು ನಾಮಕರಣ ಮಾಡುವುದು ಅಥವಾ ಸ್ವರೂಪ ಬದಲಾವಣೆಗೆ ಒತ್ತಾಯಿಸುವುದು.

​ಹೀಗೆ ಮಾಡದಿದ್ದರೆ “ಊರೇ ನಾಶವಾಗುತ್ತದೆ” ಎಂಬ ಬೆದರಿಕೆ ಒಡ್ಡುವುದು ಕೇವಲ ಶಾಸ್ತ್ರದ ಮಾತಲ್ಲ, ಅದೊಂದು ವ್ಯವಸ್ಥಿತ *’ಮಾಫಿಯಾ’*ದಂತೆ ಭಾಸವಾಗುತ್ತಿದೆ.

​ಇನ್ನೂ ವಿಪರ್ಯಾಸವೆಂದರೆ, ಒಬ್ಬ ಪಂಡಿತರು ಹೇಳಿದ್ದನ್ನು ಮತ್ತೊಬ್ಬರು ವಿರೋಧಿಸುವುದು. ಈ ವಿರೋಧಾಭಾಸದ ಹೇಳಿಕೆಗಳು ಜನರಲ್ಲಿ ಭಕ್ತಿಯ ಬದಲು ಗೊಂದಲ ಮತ್ತು ಅಶಾಂತಿಯನ್ನು ಬಿತ್ತುತ್ತಿವೆ. ಜ್ಞಾನದ ಅಹಂಕಾರ ಮತ್ತು ಧನದಾಹ ಒಂದಾದಾಗ ಇಂತಹ ವಿತಂಡವಾದಗಳು ಹುಟ್ಟಿಕೊಳ್ಳುತ್ತವೆ.

​ಲೋಭಶ್ಚೇದಗುಣೇನ ಕಿಂ ಪಿಯುನ್ಯಂ ಯದ್ಯಸ್ತಿ ಕಿಂ ಪಾತಕೈಃ

(ಒಬ್ಬ ವ್ಯಕ್ತಿಯಲ್ಲಿ ಲೋಭ ಅಥವಾ ಅತಿಯಾದ ಆಸೆ ಎನ್ನುವ ದುರ್ಗುಣವಿದ್ದರೆ, ಅವನಿಗೆ ಬೇರೆ ಯಾವ ಪಾಪಗಳ ಅಗತ್ಯವಿಲ್ಲ; ಆ ಆಸೆಯೇ ಅವನ ಸರ್ವ ಜ್ಞಾನವನ್ನು ಭಸ್ಮ ಮಾಡುತ್ತದೆ.)

​ಮನುಷ್ಯತ್ವಕ್ಕೆ ಮಾಡುವ ಅಪಚಾರ

​ವಿಶೇಷವಾಗಿ ಕೌಟುಂಬಿಕ ಕಲಹಗಳು ಉಂಟಾದಾಗ ಅದು ಪಿತೃ ಶಾಪ ಅಥವಾ ಮಾಟ-ಮಂತ್ರದ ಫಲ ಎಂದು ತೀರ್ಪು ನೀಡುವುದು ಸಂಶಯದ ಬೀಜ ಬಿತ್ತಿದಂತೆ. ಕೇವಲ ಯಾಂತ್ರಿಕ ಹೋಮ-ಹವನಗಳಿಂದ ಒಡೆದ ಮನಸ್ಸುಗಳು ಒಂದಾಗುವುದಿಲ್ಲ. ಮನುಷ್ಯ ಸಂಬಂಧಗಳನ್ನು ಯಂತ್ರ-ತಂತ್ರಗಳ ಮೂಲಕ ನಿಯಂತ್ರಿಸಬಹುದು ಎಂದು ನಂಬಿಸುವುದು ಮನುಷ್ಯತ್ವಕ್ಕೆ ಮಾಡುವ ಅಪಚಾರ.

​ಕೊನೆಯ ಮಾತು

​ದೈವಜ್ಞರು ಸಮಾಜದ ಪಾಲಿನ ಆಪ್ತ ಸಮಾಲೋಚಕರು ಮತ್ತು ಮನೋವೈದ್ಯರಾಗಿರಬೇಕು. ಸಂಕಷ್ಟದ ಸುಳಿಯಲ್ಲಿ ಸಿಲುಕಿ ಬಂದವನ ಅಸಹಾಯಕತೆಯನ್ನು ಕಂಡು ಬೆದರಿಸಿ ಹಣ ಕೀಳುವವನು ‘ಜ್ಯೋತಿಷ್ಯ ಶಿರೋಮಣಿ’ ಎಂಬ ಬಿರುದಿಗೆ ಅನರ್ಹ.

​ಜ್ಯೋತಿಷ್ಯವಿರುವುದು ವಿಧಿಯ ಬರಹವನ್ನು ಸಂಪೂರ್ಣವಾಗಿ ಅಳಿಸಿಹಾಕಲಿಕ್ಕಲ್ಲ, ಬದಲಾಗಿ ಆ ವಿಧಿಯ ಆಘಾತಗಳನ್ನು ಧೈರ್ಯವಾಗಿ ಎದುರಿಸಲು ಬೇಕಾದ ‘ವಿವೇಕ’ ಮತ್ತು *’ಸ್ಥಿತಪ್ರಜ್ಞತೆ’*ಯನ್ನು ನೀಡಲು. ಹಣದ ವ್ಯಾಪಾರಿ ಕೇವಲ ಗ್ರಹಗಳ ಸ್ಥಾನವನ್ನಷ್ಟೇ ನೋಡುತ್ತಾನೆ, ಆದರೆ ನಿಜವಾದ ಗುರು ಮನುಷ್ಯನ ಹೃದಯದ ನೋವನ್ನು ಓದಿ, ಅದಕ್ಕೆ ಸಾಂತ್ವನದ ಮದ್ದರೆಯುತ್ತಾನೆ. ಶಾಸ್ತ್ರವು ಬದುಕಿಗೆ ಬೆಳಕಾಗಬೇಕೇ ಹೊರತು, ಭಯದ ಕತ್ತಲೆಯನ್ನಲ್ಲ.

………………………………………………………………………………………………………………………………………………………………………………………………………………………………….

​✍️ ಬರಹ: ದಯಾನಂದ ರೈ ಕಳ್ವಾಜೆ

SHARE
Loading spinner

Leave a Reply

Your email address will not be published. Required fields are marked *

error: Content is protected !!