ತಲೆ ಬಾಚಿ ಎರಡು ಜುಟ್ಟು ಹಾಕಿ, ಯೂನಿಫಾರ್ಮ್ ಹಾಕಿಸಿ ನಾನು ಪಿಂಕಿಯನ್ನು ರೆಡಿ ಮಾಡಿದೆ . ಅಷ್ಟು ಹೊತ್ತಿಗೆ “ಗೌರಿ ಆಯ್ತೆನೇ?” ಎಂದು ರವಿ ಕೂಗಿದ. ಹಾ… ಆಯ್ತು ಎಂದು ಉತ್ತರಿಸುತ್ತಾ, ಶಾಲೆಯಲ್ಲಿ ಅಳಬೇಡ, ಎಲ್ಲರ ಜೊತೆ ಚೆನ್ನಾಗಿ ಮಾತಾಡು, ಫ್ರೆಂಡ್ಸ್ ಮಾಡಿಕೊ…. ಎಂದು ಬುದ್ಧಿಮಾತುಗಳನ್ನು ಹೇಳುತ್ತಾ ಕೈ ಹಿಡಿದು ಹೊರಗೆ ಕರೆತಂದೆ.
ಇಂದು ನನ್ನ ಮಗಳು ಪಿಂಕಿಗೆ ಶಾಲೆಯ ಮೊದಲ ದಿನ, ತುಂಬಾ ಖುಷಿಯಿಂದ ಅವಳು ಟೆಡ್ಡಿ ಬೇರ್ ಬ್ಯಾಗನ್ನು ಬೆನ್ನಿಗೆ ಹಾಕಿಕೊಳ್ಳುತ್ತಾ ಅಪ್ಪನೊಂದಿಗೆ ಬೈಕಿನಲ್ಲಿ ಹತ್ತಿ ಕೂತು “ಅಮ್ಮಾ ಟಾ ಟಾ” ಅನ್ನುತ್ತಾ ಶಾಲೆಗೆ ಹೊರಟಳು. ಮೊದಲಿನಂತಾಗಿದ್ದರೆ ನಾನು ಕೂಡ ಈಗ ಶಾಲೆಗೆ ಹೋಗಬೇಕಿತ್ತು, ಪ್ರೆಗ್ನೆನ್ಸಿ ಯಲ್ಲಿ ಶಾಲೆ ಬಿಟ್ಟಿದ್ದೆ ನಂತರ ಮಗು ಅದರ ಹಿಂದೆ ಓಡಾಟದಿಂದ ಮುಂದುವರಿಸಲಿಲ್ಲ. ಈಗ ಅವಳು ಶಾಲೆಗೆ ಹೊರಟು ನಿಂತಾಗ ನನಗೆ ಸ್ವಲ್ಪ ಬಿಡುಗಡೆ ಎನಿಸುತ್ತದೆ . ಹಾಗೇ… ಒಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಾ ನಾನು ಮನಸ್ಸಿನಲ್ಲೇ, “ಏನಾದರೂ ಸರಿ ರವಿಯನ್ನು ಮದುವೆಯಾಗಿ ನಾನು ಸೋಲಲಿಲ್ಲ”ಅಂದುಕೊಂಡೆ. ಹತ್ತು ಜನ್ಮಕ್ಕಾಗುವಷ್ಟು ಅನುಭವಿಸಿದ ಕಷ್ಟ ನನ್ನ ಮನಸ್ಸಿಗೆ ಮರುಕಳಿಸಿದವು.
“ಇವತ್ತು ಎಕನಾಮಿಕ್ಸ್ ಕ್ಲಾಸ್ ತುಂಬಾ ಚೆನ್ನಗಿತ್ತಾಲ್ವೇ, ಪ್ರಾಫಿಟ್ ಅಂಡ್ ಲಾಸ್ ಬಗ್ಗೆ mam ಎಷ್ಟು ಚೆನ್ನಾಗಿ ವಿವರಿಸಿದ್ರು. ಜೋಕ್ ತರ ಹೇಳಿ ಸರಿಯಾಗಿ ಅರ್ಥ ಮಾಡ್ಸಿದ್ರು ಅಲ್ವೇ?” ನಾನು ಗೆಳತಿ ಸುಧಾ ಳಲ್ಲಿ ಹೇಳ್ತಿರುವಾಗ ನಮ್ಮ ಎದಿರು ಒಂದು ರಿಕ್ಷಾ ಪಾಸ್ ಆಯ್ತು .
“ಏನೇ ನಿನ್ನನ್ನು ಕೂರಿಸಿಕೊಂಡು ಹೋಗಿದ್ದರೆ ಏನಾಗುತ್ತಿತ್ತು, ಒಂದೇ ಮನೆಗೆ ಹೋಗುವಾಗ ಹೀಗೆ ಮಾಡುವುದೇನೆ?” ಕೋಪದಿಂದ ಬಡಪಡಿಸಿದಳು ಸುಧಾ
ಹೌದು ನನ್ನ ತಮ್ಮ ಹಾಗೂ ತಂಗಿಯನ್ನು ಶಾಲೆಗೆ ಕೊಂಡೊಯ್ಯಲು ಹಾಗೂ ಸಂಜೆ ಬಿಡಲು ರಿಕ್ಷಾ ಬರುತ್ತಿತ್ತು. ಆದ್ರೆ ನಾನು ಶಾಲೆ ಸೇರಿದಂದಿನಿಂದ ಪಿ ಯು ವರೆಗೂ ನಡೆದುಕೊಂಡೆ ಹೋಗುತ್ತಿದ್ದೆ . ಹಾಗೂ ನನಗೆ ಜೊತೆಯಾಗಿ ಸುಧಾ ಇರುತ್ತಿದ್ದಳು,ಅವಳ ಮನೆ ನಮ್ಮ ಮನೆಯ ಹತ್ತಿರವೇ ಇತ್ತು. ಸುಧಾಳ ಮಾತನ್ನು ತಲೆಗೆ ಹಚ್ಚಿಕೊಳ್ಳದೆ, “ಅದೆಲ್ಲಾ ಬೀಡೇ…. ಅಲ್ಲಿ ನೋಡು ಹೇಗೆ ಕಪ್ಪು ಮೋಡ ಹಾಕಿದೆ” ಅಂದೆ. “ಇದೇನೇ ಗೌರಿ ಈ ಟೈಮಿನಲ್ಲಿ ಮಳೆನಾ?” ಸುಧಾ ಹೇಳುತ್ತಿದ್ದಂತೆ ನಾನು “ಈಗ ಶುರುವಾಗುತ್ತೆ ಮಳೆ ಮನೆ ತಲುಪಿ ಬಿಡೋಣ” ಎನ್ನುತ್ತಾ,ಅವಳ ಕೈ ಹಿಡಿದು ಓಡುತ್ತಾ ಎದುಸಿರು ಬಿಡುತ್ತಾ ನಾವು ಮನೆ ಸೇರಿದೆವು.

ಮನೆಗೆ ಬಂದು ನೋಡಿದರೆ, ಅಕಾಲದಲ್ಲಿ ಮಳೆ ಪ್ರಕೃತಿಯಲ್ಲಿ ಮಾತ್ರವಲ್ಲ ನನ್ನ ಜೀವನದಲ್ಲೂ ಬಂದಿತ್ತು. ಕೈಕಾಲು ತೊಳೆದು ಒಳಗೆ ಹೋಕ್ಕೊಡನೆಯೇ ಚಿಕ್ಕಮ್ಮ “ಬೇಗ ರೆಡಿಯಾಗು ಈ ಸೀರೆ ಉಟ್ಟುಕೊಂಡು ಬಾ” ಹೇಳುತ್ತಾ ಒಂದು ಸೀರೆ ನನ್ನ ಕೈಗೆ ಇತ್ತರು. ಯಾಕೆ ಏನು ಎಂದು ಕೇಳುವ ಧೈರ್ಯ ನನಗಿರಲಿಲ್ಲ. ನಾನು ಅವಕ್ಕಾಗಿ ಅವರ ಮುಖ ನೋಡುತ್ತಲೇ ನಿಂತೆ. ನನ್ನ ಗೊಂದಲದ ಮುಖ ನೋಡಿ ಅವರೇ ಅಂದರು “ನಿನ್ನನ್ನು ನೋಡಲು ಗಂಡಿನ ಕಡೆಯವರು ಬರುತ್ತಿದ್ದಾರೆ ಅದಕ್ಕೆ ಚಂದವಾಗಿ ರೆಡಿಯಾಗು”
“ನನಗೀಗ ಮದುವೆನಾ?! ಓದುವುದನ್ನು ಬಿಟ್ಟು ಬೇರೆ ಯಾವುದರ ಬಗ್ಗೆಯೂ ಚಿಂತನೆ ಕೂಡ ನಾನು ಇಲ್ಲಿವರೆಗೆ ಮಾಡಿಲ್ಲ. ಈಗ ನನಗೆ 17 ನೆಡೆಯುತ್ತಿರುವುದು, ಮೂರು ತಿಂಗಳು ಹೋದರೆ 18 ಆಗುತ್ತದೆ. ಈ ಮಕ್ಕಳಾಟದ ವಯಸ್ಸಿನಲ್ಲಿ ನನಗೆ ಮದುವೆನಾ?? ಜೀವನ ನನ್ನದು ನಿರ್ಧಾರ ತೆಗೆದುಕೊಳ್ಳುವವರು ಯಾರೋ? ಅಮ್ಮ ಇದ್ದಿದ್ದರೆ ಈ ಪ್ರಸಂಗ ಬರುತ್ತಿತ್ತೇ? ಇಂತಹುದಕ್ಕೆ ಅವಕಾಶ ಕೊಡುತ್ತಿದ್ದಳೇ ಅವಳು? ನನಗೇನು ಅವಳಿಗೂ ಕೂಡ ನನ್ನ ವಯಸ್ಸಿನಲ್ಲಿ ಹೀಗೆ ಆಗಿದ್ದಿರಬಹುದು. ಅವಳತ್ರ ವಿಚಾರ ಪ್ರಸ್ತಾಪಿಸಿ ಸಮ್ಮತಿ ಪಡೆದಿದ್ದರೆ ಅಷ್ಟು ಚೆಲುವೆ ಅಮ್ಮನಿಗೆ, ಕಾಲು ಊನ ಇರುವ ನನ್ನ ಅಪ್ಪನನ್ನು ಮದುವೆ ಆಗುತ್ತಿದ್ದಳೇ? ಹಾ… ಈಗ ನನಗೂ ಅವಳದೇ ಸ್ಥಿತಿ ಬಂತಲ್ಲವೇ?”
ನನಗೆ ಸರಿಯಾಗಿ ನೆನಪಿದೆ, ನಾನು ಒಂದನೇ ತರಗತಿಗೆ ಸೇರಿ ಶಾಲೆಗೆ ಹೋಗಲಾರಂಭಿಸಿ ಕೆಲವೇ ದಿನಗಳಾಗಿದ್ದವು ಅಷ್ಟೇ. ಬೆಳಿಗ್ಗೆ ಅಮ್ಮ ನನ್ನನ್ನು ಶಾಲೆಗೆ ಬಿಟ್ಟು ಬಂದಿದ್ದಳು. ಜೂನ್ ತಿಂಗಳಲ್ಲವೇ ಜೋರಾಗಿ ಸುರಿಯೋ ಮಳೆ, ಸಂಜೆ ಬಂದು ನೋಡುತ್ತೇನೆ ಅಮ್ಮನನ್ನು ಅಂಗಳದಲ್ಲಿ ಮಲಗಿಸಿದ್ದರು. ಅಲ್ಲೇ ಸ್ವಲ್ಪ ದೂರದಲ್ಲಿ ಅಪ್ಪ ಕೂತು ಅಳುತ್ತಿದ್ದರು. ಮನೆಯಲ್ಲಿರುವವರೆಲ್ಲರೂ ಬೇಸರದಲ್ಲಿ ಇದ್ದರು. ಕುಟುಂಬದ ಹಿರಿಯರೊಬ್ಬರು ನನ್ನನ್ನು ಹಾಗೆ ಒಳಗೆ ಕರೆದುಕೊಂಡು ಹೋದರು. ಸ್ವಲ್ಪ ಹೊತ್ತಿನಲ್ಲಿ ಹೊರಗಡೆ ಬಂದು ನೋಡಿದರೆ ಅಮ್ಮನು ಅಲ್ಲಿರಲಿಲ್ಲ. ನಾನು ಮನೆಯಲ್ಲಿದ್ದವರಲ್ಲಿ ಕೇಳಿದಾಗ ಅಮ್ಮನನ್ನು ದೇವರು ಕರೆದುಕೊಂಡು ಹೋಗಿದ್ದಾರೆ ಅವಳಿನ್ನು ಬರುವುದಿಲ್ಲ ಎಂದರು. ನನಗೆ ಅದರ ಅರ್ಥ ಏನು ಎಂಬುದು ಗೊತ್ತಾಗಲಿಲ್ಲ. ಅಮ್ಮ ಇಲ್ಲದ ಮನೆ ಬಿಕೋ ಎನ್ನುತ್ತಿತ್ತು. ಅಮ್ಮ ಅಮ್ಮ ಎಂದು ನಾನು ಬಿಕ್ಕಿ ಬಿಕ್ಕಿ ಅಳುತ್ತಿದ್ದೆ, ಕೇಳುವವರು ಯಾರು ಇಲ್ಲ. ಅಪ್ಪನಿಗೆ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಕುರ್ಚಿಯಲ್ಲಿ ಮoಕಾಗಿ ಕುಳಿತು ಅಳುತ್ತಿದ್ದರು.
ಇನ್ನು ಅಪ್ಪ ಮಗಳನ್ನು ಹೀಗೆ ಬಿಟ್ಟರೆ ಆಗದು, ಇವರಿಗೊಂದು ಗತಿ ಬೇಕಲ್ಲವೇ ಎಂದು ಅಪ್ಪನಿಗೆ ಒಂದು ಹುಡುಗಿಯನ್ನು ನೋಡಿ ಹಿರಿಯರು ಮದುವೆ ಮಾಡಿದರು. ಮನೆಗೆ ಚಿಕ್ಕಮ್ಮ ಬಂದದ್ದೇ ಸರಿ ನಾನು ನನ್ನ ಸ್ವಾತಂತ್ರವನ್ನು ಕಳೆದುಕೊಂಡಿದ್ದೆ. ಅಪ್ಪನಿಗೆ ಸ್ವಂತ ಕಾರ್ಯಕ್ಕೆ ಸಹಾಯಕ್ಕೆ ಒಬ್ಬರು ಬೇಕಾಗುತ್ತದೆ, ಹಾಗಿರುವಾಗ ಅವರು ನನ್ನ ಪ್ರೋತ್ಸಾಹಕ್ಕೆ ಹೇಗೆ ಬರಲು ಸಾಧ್ಯ?…
ರೆಡಿಯಾದಿಯಾ? ಎಂಬ ಚಿಕ್ಕಮ್ಮನ ಧ್ವನಿ ನನ್ನನ್ನು ಯೋಚನೆಯಿಂದ ಹೊರಗೆ ತಂದಿತು ಗರ ಬಡಿದಂತಿದ್ದ ನಾನು ಲಟ್ಟನೆ ಎದ್ದುನಿಂತೆ . ಸೀರೆಯನ್ನು ಕೈಯಲ್ಲಿ ಹಿಡಿದು ತಿರುಗಿಸಿ ನೋಡಿದೆ, ಹೇಗೆ ಉಡುವುದೆಂದು ಗೊತ್ತಿರಬೇಕಲ್ಲವೇ? ಚಿಕ್ಕ ವಯಸ್ಸಿನಲ್ಲಿ ಇರುವಾಗ ನಾನು ಮತ್ತು ಸುಧಾ ಟೀಚರ್ ಆಟ ಆಡುತ್ತಿದ್ದೆವು, ಆಗ ಉಟ್ಟುಕೊಳ್ಳುತ್ತಿದ್ದಂತೆ ಆ ಸೀರೆಯನ್ನು ಮೈಗೆ ಸುತ್ತಿಕೊಂಡೆ. ಸ್ವಲ್ಪ ಹೊತ್ತಿನಲ್ಲಿ ಚಿಕ್ಕಮ್ಮ ಕೈಯಲ್ಲಿ ಮಲ್ಲಿಗೆ ಹೂವು ಹಿಡುಕೊಂಡು ಬಂದರು. ಅದನ್ನು ನನ್ನ ತಲೆಗೆ ಸಿಕ್ಕಿಸಿ, ಸೊಟ್ಟ ಸೊಟ್ಟಗಾಗಿ ಉಟ್ಟುಕೊಂಡಿದ್ದ ಸೀರೆಯನ್ನು ಸ್ವಲ್ಪ ಸರಿ ಮಾಡಿದರು. ಅಷ್ಟೊತ್ತಿಗೆ ಮಳೆ ಬಂದು ನಿಂತಿತ್ತು.

ಹೊರಗಡೆ ಕಾರಿನಲ್ಲಿ ರೊಯ್ ಅಂತ ಹುಡುಗನ ಕಡೆಯವರು ಬಂದರು. ಸ್ವಲ್ಪ ಹೊತ್ತಿನಲ್ಲಿ ನನ್ನನ್ನು ಕಾಫಿ ತೆಗೆದುಕೊಂಡು ಬರಲು ಕರೆದರು. ಸೀರೆ ಉಟ್ಟು ಸರಿಯಾಗಿ ನಡೆಯಲು ಬಾರದ ನಾನು ನಡುಗುವ ಕಾಲುಗಳನ್ನು ನೆರಿಗೆ ಮೇಲೆ ಊರುತ್ತಾ, ವಾಲುತ್ತಾ ಮುಂದೆ ಹೋದೆ. ಅವರೆಲ್ಲರೂ ನನ್ನನ್ನು ಏಕ ಚಿತ್ತವಾಗಿ ನೋಡುತ್ತಿದ್ದರು. ನನಗೆ ನಾಚಿಕೆ, ಹೆದರಿಕೆ ಎಲ್ಲಾ ಹೆಚ್ಚಾಗುತ್ತಿತ್ತು. ಅಂತೂ ನಡುಗುತ್ತಾ ಅವರಿಗೆ ಕಾಫಿಯನ್ನು ಕೊಡುತ್ತಾ ಕಣ್ಣೆತ್ತಿ ಹುಡುಗನನ್ನು ನೋಡಿದೆ, ಅವನು ತುಂಬಾ ಕೃಶ ಶರೀರದವನಾಗಿದ್ದ. ನೋಡಲು ಅಷ್ಟಕಷ್ಟೇ ಇದ್ದ. ನನ್ನನ್ನು ಅವರ ಎದುರು ಅಲ್ಲೇ ಕೂರಲು ಹೇಳಿದರು. ಚಿಕ್ಕಮ್ಮನ ತಮ್ಮ ಹಾಗೂ ಹುಡುಗನ ಬಾವ ಸ್ನೇಹಿತರಂತೆ. ಅವರು ನನಗೆ ಎಲ್ಲರನ್ನು ಪರಿಚಯಿಸಿದರು. ಇವನು ಮದುವೆಯಾಗಲಿರುವ ಗಂಡು ಗಿರೀಶ, ಪಂಚಾಯತಿನಲ್ಲಿ ಪಿಡಿಒ ಆಗಿ ಕೆಲಸ ಮಾಡುತ್ತಿದ್ದಾನೆ. ಅವನ ಅಪ್ಪ ಕೇಶವ, ಅವರು ಗಿರಿಜಾ, ಗಿರೀಶನ ಅಕ್ಕ ಹಾಗೂ ಭಾವ ಗೋಪಾಲ. ನಾನು ಎಲ್ಲರಿಗೂ ನಮಸ್ಕರಿಸಿದೆ. ಅವನು ನನ್ನನ್ನು ಹಾಗೆ ಕಣ್ಣು ಮಿಟುಕಿಸದೇ ನೋಡುತ್ತಿದ್ದ. ನನಗೆ ತುಂಬಾ ಮುಜುಗರ ಆಗುತ್ತಿತ್ತು. ಅಲ್ಲಿ ಏನೇನು ಮಾತುಕತೆ ಆಯ್ತು ನನಗೆ ತಿಳಿಯಲಿಲ್ಲ.
ಚಿಕ್ಕಮ್ಮನ ಕಾಲಂತೂ ನೆಲದಲ್ಲಿ ನಿಲ್ಲುತ್ತಿರಲಿಲ್ಲ. ನನ್ನನ್ನು ಈ ಮನೆಯಿಂದ ಒಮ್ಮೆ ಹೊರ ದಬ್ಬಿದರೆ ಸಾಕು ಎನ್ನುವ ಭಾವನೆ ಅವರಿಗಿತ್ತು “ಹುಡುಗ ಸರಕಾರಿ ಉದ್ಯೋಗಸ್ಥ, ಗೌರಿಯನ್ನು ರಾಣಿಯಂತೆ ನೋಡುತ್ತಾನೆ ಇನ್ನೇನು ಬೇಕು ಅವಳಿಗೆ?” ಎಂದು ಎಲ್ಲರ ಮುಂದೆ ಹೇಳಿ ಜಂಭ ಪಡುತ್ತಿದ್ದಳು.ನಾನು ನೋಡಲು ಅಮ್ಮನಂತೆ ಅಂತ ಎಲ್ಲರೂ ಹೇಳುತ್ತಾರೆ. ಅಮ್ಮ ತುಂಬಾ ಸುಂದರವಾದಗಿದ್ದಳು . ಇದುವೇ ನನಗೆ ಶಾಪವಾಯಿತು ಎಂದು ನಾನು ಸುಧಾಳ ಹತ್ತಿರ ಹೇಳಿ ಕೊರಗುತ್ತಿದ್ದೆ. ಅಂತೂ ಮೂರು ತಿಂಗಳಿಗೆ ನನ್ನ ಹುಟ್ಟು ಹಬ್ಬದ ದಿನವೇ ಮದುವೆ ನಡೆದೋಯ್ತು.
ಗಿರೀಶನ ಸಂತೋಷಕ್ಕಂತೂ ಮಿತಿಯೇ ಇರಲಿಲ್ಲ, ತನಗೆ ಇಂತಹ ಸುಂದರವಾದ ಹುಡುಗಿ ಸಿಗಬಹುದೆoಬ ಕಲ್ಪನೆಯೂ ಅವನಿಗೆ ಇರಲಿಲ್ಲ. 13ನೇ ವಯಸ್ಸಿಗೆ ಅವನು ತನ್ನ ಅಮ್ಮನನ್ನು ಕಳೆದುಕೊಂಡಿದ್ದ. ಅಕ್ಕ, ಗಿರಿಜಾ ಅಮ್ಮನ ಸ್ಥಾನ ತುಂಬಿದ್ದಳು. ಗಿರೀಶನ ಅಮ್ಮ ಕೊನೆಯ ಉಸಿರು ಎಳೆಯುವುದಕ್ಕೂ ಮುನ್ನ ಗಿರಿಜಾಳಿಗೆ ಮದುವೆಯಾಗಿತ್ತು.ನನಗೆ ಗಂಡನ ಮನೆಯಲ್ಲಿ ಅತ್ತೆಯ ಕಾಟ ಇರಲಿಲ್ಲ. ಗಿರೀಶ ಚಿಕ್ಕವನಿರುವಾಗ ಶಾಲೆಗೆ ರಜೆ ಇರುವಾಗಲೆಲ್ಲ ಅಕ್ಕನ ಮನೆಯಲ್ಲಿ ಕಳೆಯುತ್ತಿದ್ದನಂತೆ . ಅವನಿಗೆ ಎಲ್ಲಾ ವಿಚಾರಗಳಿಗೂ ಸಹಕಾರ ಸಲಹೆ ನೀಡುತ್ತಿದ್ದರಂತೆ ಅಕ್ಕ ಹಾಗೂ ಭಾವ. ತಮ್ಮನಿಗೆ ಇಂತಹ ಸುಂದರವಾದ ಹುಡುಗಿಯನ್ನು ನೋಡಿ ಮದುವೆ ಮಾಡುತ್ತಿದ್ದೇವೆ ಎಂಬ ಹೆಮ್ಮೆ ಅವರಿಗೂ ಇತ್ತು .
ನಾನು ಮದುವೆಯಾಗಿ ಬಂದಾಗ, ಗಿರೀಶ ಹಾಗೂ ಅವನ ಅಪ್ಪ ಹೀಗೆ ನಾವು ಮೂರು ಜನ ಮಾತ್ರ ಮನೆಯಲ್ಲಿದ್ದುದು . ವೈಯಕ್ತಿಕತೆಗೇನು ಕೊರತೆ ಇರಲಿಲ್ಲ. ಗಿರೀಶ “ಈಗಷ್ಟೇ ಪಿ ಯು ಮುಗಿಸಿದ್ದಿ, ಮುಂದೆ ಓದುತ್ತಿಯಾ?”ಎಂದು ಕೇಳಿದ .ನನಗೂ ಅದೇ ಬೇಕಿತ್ತು,ಮೊದಲು ಅಮ್ಮನ ಮನೆಯಲ್ಲಿರುವಾಗ ನನ್ನನ್ನು ಯಾರು ವಿಚಾರಿಸುವರಿರ್ಲಿಲ್ಲ. ನಾನು ಡಿಗ್ರಿ ಕಾಲೇಜಿಗೆ ಸೇರಿಕೊಂಡೆ . ಗಿರೀಶ ನನ್ನನ್ನು ಅರ್ಥ ಮಾಡಿಕೊಂಡಿದ್ದ. ಸ್ವಲ್ಪ ಪ್ರೀತಿ ಸಿಕ್ಕಿದ ನನಗೆ ಅವನನ್ನು ಬಿಟ್ಟು ಇರಲಾಗುತ್ತಿರಲಿಲ್ಲ . ನನ್ನ ಓದು ಮುಂದುವರಿಯುತ್ತಿತ್ತು.ದಿನಗಳು ಉರುಳುತಿದ್ದಂತೆ, ನನ್ನ ಮುಖದಲ್ಲಿ ಕಳೆಯೇ ಇಲ್ಲದಂತಾಗಿ ಹೋಯ್ತು. ಏಕೆಂದರೆ ನನ್ನ ದೈಹಿಕ ತೃಷೆಯನ್ನು ತೀರಿಸಲು ಗಿರೀಶನಿಗೆ ಸಾಧ್ಯವಾಗುತ್ತಿರಲಿಲ್ಲ, ಅವನಿಗೂ ಆ ಕೊರಗು ಇತ್ತು .

ವಯಸ್ಸಿರುವಾಗಲೇ ಹೆಂಡತಿಯನ್ನು ಕಳಕೊಂಡ ಮಾವನಿಗೆ ನನ್ನನ್ನು ನೋಡುವಾಗ ಆಸೆ ಚಿಗುರುತ್ತಿರಬಹುದು ಎಂದು ನನಗೆ ಅವರು ನೋಡುವ ದೃಷ್ಟಿಯಿಂದ ತಿಳಿಯಿತು.ಒಂದೆರಡು ಸಲ ನಾನು ಬಟ್ಟೆ ಬದಲಾಯಿಸುವಾಗ ಬಾಗಿಲಿನಲ್ಲಿ ಏನೋ ಸದ್ದಾದಂತೆ ಆಗಿತ್ತು. ಅದರ ಬಗ್ಗೆ ನಾನು ತಲೆ ಕೆಡಿಸಿಕೊಂಡಿರಲಿಲ್ಲ. ಒಂದು ದಿನ ನನ್ನ ಪಿನ್ನು ರೂಮ್ ನ ಹೊರಗಡೆ ಇಟ್ಟಿದ್ದೆ ಎಂದು ರಭಸವಾಗಿ ನಾನು ಬಾಗಿಲು ತೆಗೆದು ಹೊರಗೆ ಬರಬೇಕಾದರೆ, ಬಾಗಿಲಿನಲ್ಲಿ ಮಾವನನ್ನು ನೋಡಿ ಎದೆ ಝಲ್ಲೆಂದಿತು. ಇದಕ್ಕೆ ಮೊದಲು ಕೆಲವು ದಿನಗಳು ಬಾಗಿಲಿನಲ್ಲಿ ಸದ್ದು ಕೇಳಿದ್ದು ಏಕೆಂದು ಆಗ ನನಗೆ ಅರ್ಥವಾಗಿತ್ತು. ಕಾಮುಕರಿಂದ ಜಾಗೃತರಾಗಿರಬೇಕೆಂದು ನಾನು ಬಟ್ಟೆ ಬದಲಾಯಿಸುವಾಗ ತುಂಬಾ ಜೋಪಾನವಾಗಿ ಭದ್ರ ಮಾಡಿಕೊಳ್ಳ ತೊಡಗಿದೆ. ಅವರು ಮುಂದೊಂದು ದಿನ ಸ್ನಾನ ಮಾಡುವಾಗ ಬಾಗಿಲಿನ ಸಂದಿನಲ್ಲಿ ಇಣುಕುತ್ತಾ ಸಿಕ್ಕಿಬಿದ್ದಿದ್ದರು. ಗಂಡನಲ್ಲಿ ಈ ವಿಷಯವಾಗಿ ಹೇಗೆ ಮಾತನಾಡಲಿ,?ಮನೆಯಲ್ಲಿ ಹೇಗೆ ಬಿರುಕು ತರಲಿ? ಗೊಂದಲದಲ್ಲಿ ಸುಮ್ಮನಿದ್ದೆ. ಎಲ್ಲಾ ಕಡೆ ನಾನು ತುಂಬಾ ಜೋಪಾನವಾಗಿ ಇರುತ್ತಿದ್ದೆ. ಕಳೆಗುಂದಿದ ನನ್ನ ಮುಖವನ್ನು ನೋಡಿ ನನಗೆ ಜೀವನದಲ್ಲಿ ತೃಪ್ತಿ ಇಲ್ಲ ಎಂದು ಅರ್ಥಮಾಡಿಕೊಂಡ ಮಾವ,ನಾನು ಅವರ ಕಾಮ ಪ್ರವೃತ್ತಿಗೆ ಸಹಕರಿಸುವೆ ಅಂದುಕೊಂಡು, ಒಂದು ದಿನ ನಾನು ಗುಡಿಸುತ್ತಿರುವಾಗ ಹಿಂದಿನಿಂದ ಬಂದು ನನ್ನ ಸೊಂಟ ಹಿಡುಕೊಂಡರು. ಆ ದಿನ ಹೇಗೋ ತಪ್ಪಿಸಿಕೊಂಡೆ , ಮುಂದೆ ಏನು ತೋಚದೆ ಗಂಡನಲ್ಲಿ ಎಲ್ಲಾ ವಿಷಯವನ್ನು ಹೇಳಿದೆ . ಪರಿಹಾರವಾಗಿ ಗಂಡ “ನೀನು ಸದ್ಯಕ್ಕೆ ಪಿ. ಜಿ.ಯಲ್ಲಿದ್ದುಕೊಂಡು ಓದಿಕೋ, ಯಾರಾದರೂ ಕೇಳಿದರೆ ಕೊನೆಯ ವರ್ಷವಲ್ಲ, ಹೋಗಿ ಬಂದು ಓದಿಕೊಳ್ಳಲು ಕಷ್ಟವಾಗುತ್ತದೆ ಎಂದು ಹೇಳಿಕೊಳ್ಳೋಣ” ಎಂದ. ಅದಕ್ಕೇನೋ ಪರಿಹಾರ ಸಿಕ್ಕಿತು, ಮನಸ್ಸಿನಲ್ಲಿರುವ ಕೋಲಾಹಲವನ್ನು ದೂರವಾಗಿಸುವುದು ಹೇಗೆ?..
ಮೊದಲಿನಿಂದಲೂ ಮನೆಯ ಹದಗೆಟ್ಟ ಸ್ಥಿತಿಯಲ್ಲಿ ಓದುತ್ತಿದ್ದ ನಾನು ಈ ಎಲ್ಲಾ ಒತ್ತಡವನ್ನು ಸಹಿಸುತ್ತಾ ಓದಿನಲ್ಲಿ ಹಿಂದುಳಿಯಲಿಲ್ಲ. ಡಿಗ್ರಿ ಮುಗಿಸಿ, 10 ತಿಂಗಳ ಬಿಎಡ್ ಕೋರ್ಸ್ಗೆ ಸೇರಿಕೊಂಡೆ . first day ಕ್ಲಾಸ್ ಗೆ ಹೋದಾಗ ಅಚ್ಚರಿ ಕಾದಿತ್ತು.ನನ್ನ ಜೊತೆ ಹೈಸ್ಕೂಲ್ನಲ್ಲಿ ಕಲಿಯುತ್ತಿದ್ದ ತಾರಾ ಈಗ ನನ್ನ ಕ್ಲಾಸ್ನಲ್ಲಿ ಇದ್ದಳು . ನನಗೆ ಸ್ವಲ್ಪ ಧೈರ್ಯ ಬಂದಿತ್ತು ಅವಳನ್ನು ನೋಡಿ. ಮಾತನಾಡುತ್ತಾ ಅವಳು ಅಂದಳು “ನಮ್ಮ ಕ್ಲಾಸ್ ನಲ್ಲಿ ರವಿ ಇದ್ದನಲ್ಲ ಅವನೂ ಇದೇ ಕ್ಲಾಸ್ ಗೆ ಜಾಯಿನ್ ಆಗಿದ್ದಾನಂತೆ ಮೊನ್ನೆ ನಾನು ಅಡ್ಮಿಶನ್ ಗೆ ಬಂದಾಗ ಸಿಕ್ಕಿದ್ದ”ಹೀಗೆ ನಾವು ಮೂರು ಜನ ನಾವು ಕ್ಲೋಸ್ ಫ್ರೆಂಡ್ಸ್ ಆಗಿ ಆಗಿಬಿಟ್ಟಿದ್ದೆವು. ನಾನು ಪಿ ಜಿಯಲ್ಲೇ ಇದ್ದುಕೊಂಡು ಓದು ಮುಂದುವರಿಸಿದೆ . ಮನಸ್ಸಿನ ಭಾವನೆಯನ್ನು ಗಂಡನಲ್ಲಿ ಹೇಳಿಕೊಳ್ಳಲು ಸಾಧ್ಯವಾಗದೆ, ಗಂಡ ನಿಂದ ಸ್ವಲ್ಪ ಸ್ವಲ್ಪವೇ ದೂರ ಇರ ತೊಡಗಿದೆ .
ಎಲ್ಲರಂತೆ ನನಗೂ ಮನಸ್ಸಿನ ತುಮುಲವನ್ನು ಯಾರಲ್ಲಾದರೂ ಹೇಳಿಕೊಳ್ಳಬೇಕೆಂದೆನಿಸಿತು . ಅಮ್ಮನ ಮನೆಯಲ್ಲಿ ಅಂತೂ ಮನಸು ಬಿಚ್ಚಿ ಮಾತನಾಡಲು ಯಾರು ಇರಲಿಲ್ಲ. ಪ್ರೀತಿ ತೋರಿಸುತ್ತಿದ್ದ ಗಿರಿಜಾಳಲ್ಲಿ ನಾನು ರಜಾ ದಿನಗಳಲ್ಲಿ kಅಲ್ಲಿಗೆ ಹೋಗಿದ್ದಾಗ ಎಲ್ಲಾ ವಿಚಾರ ಹೇಳಿಕೊಂಡೆ.ಅದೇ ನನ್ನದು ತಪ್ಪಾಯ್ತು ಅವಳು ಗಂಡ ಗೋಪಾಲನಲ್ಲಿ ಅದನ್ನು ಹೇಳಿರಬೇಕು. ಕೆಲವು ದಿನಗಳ ನಂತರ ಅವನು “ದಂಪತಿಗಳು ನಮಗೆ ಮಕ್ಕಳಾಗುವುದಿಲ್ಲವೆಂದು ಗೈನೆಕಲಜಿಸ್ಟ್ ಹತ್ರ ಹೋಗಿ ಕೇಳಿದರು.
ಡಾಕ್ಟರ್: ಟ್ರೈ ಮಾಡುತ್ತಿರಿ ಆಗುತ್ತೆ.
ಗಂಡ : ನಾನು ಅರ್ಜುನನಲ್ಲ ಒಂದೇ ಸಲಕ್ಕೆ ಹೊಡೆದು ಉದುರಿಸಲು, ಎರಡು ವರ್ಷದಲ್ಲಿ 200 ಸಲವಾದರೂ ಆಗಲಿಲ್ಲವಲ್ಲ
ಡಾಕ್ಟರ್ : ನೀವು ಎಷ್ಟು ಸಲವೆಂದು ಎಣಿಸುತ್ತೀರಾ?
ಗಂಡ: ಎಣಿಸುದೇನು ಬಂತು ಎಷ್ಟೋ ಸಲ ಎಣಿಸುವುದನ್ನೆ ಮರೆತುಬಿಡುತ್ತೇವೆ.” ಎಂಬ ಜೋಕ್ ಗೋಪಾಲ ಮೆಸೇಜ್ ಮಾಡಿದ . ಇವರು ಹೀಗೇಕೆ ಮಾಡುತ್ತಿದ್ದಾರೆ?ಎಂದು ತುಂಬಾ ಯೋಚಿಸಿದೆ. ನನ್ನ ಮನಸ್ಸನ್ನು ಹಗುರ ಮಾಡಲೆಂದು ಅವರು ಹೀಗೆ ಮಾಡುತ್ತಿದ್ದಾರೆ ಎಂದುಕೊಂಡೆ, ಆ ವಿಚಾರದ ಬಗ್ಗೆ ಮಾತಾಡದೆ ಇರುವಷ್ಟು ಎಳೆಯ ವಯಸ್ಸಿನವಳಾಗಿರಲಿಲ್ಲವಲ್ಲಾ ನಾನು. ಅದಕ್ಕೆ ರಿಪ್ಲೈ ಮಾಡಿದೆ. ನಿಧಾನವಾಗಿ ತುಂಬಾ ತುಂಬಾ ಆ ರೀತಿಯ ಮೆಸೇಜುಗಳು ಬರಲಾರಂಭಿಸಿದವು,ಅವುಗಳಿಗೆ ರಿಪ್ಲೈ ಮಾಡುತ್ತಿದ್ದೆ . ದಿನಗಳು ಕಳೆದಂತೆ, ಅವುಗಳನ್ನೇ ತೋರಿಸುತ್ತಾ ಅವನು ಆ ತರಹ ನಾವಿಬ್ಬರೂ ಸುಖಿಸೋಣ ಎಂದು ಕರೆಯುತ್ತಾ ಬ್ಲಾಕ್ ಮೇಲ್ ಮಾಡತೊಡಗಿದ .ಗೋಪಾಲ ಇಂತಹ ಗೋಮುಖ ವ್ಯಾಘ್ರ ಎಂದು ತಿಳಿದಿರಲಿಲ್ಲ. ಆಮೇಲೆ ವಿಚಾರಿಸಿದಾಗ ತಿಳಿಯಿತು ಅವನ ರತಿ ಕಾರ್ಯ ಸುಮಾರು ಕಡೆ ಇತ್ತು ಎಂದು. ನಾನು ಬಾಣಲೆಯಿಂದ ಬೆಂಕಿಗೆ ಬಿದ್ದಿದ್ದೆ, ಮಾವನವರಿಂದ ತಪ್ಪಿಸಿಕೊಂಡರೆ, ಭಾವನ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದೆ.
ಪಾಪಿ ಹೋದಲ್ಲಿ ಮೊಳಕಾಲು ನೀರು ಎನ್ನುವಂತೆ ನನ್ನ ಪರಿಸ್ಥಿತಿಯೂ ಆಯ್ತು. ನನಗೆ ನಾನೇ ಶಾಪ ಇಡುತ್ತಾ ಅಳುತ್ತಾ ಕೂರುತ್ತಿದ್ದೆ . ಗಂಡನಲ್ಲಿ ಹೇಳಿದರೆ ಅವನು ಇದನ್ನು ನಂಬುವನೇ? ಅದು ಅಲ್ಲದೆ ಮೆಸೇಜ್ ಗೆ ಮಾಡಿದ ರಿಪ್ಲೈ ಸೇವ್ ಮಾಡಿ ಇಟ್ಟುಕೊಂಡಿದ್ದ ಗೋಪಾಲ . ತನ್ನಲ್ಲಿ ಸುಖ ಸಿಕ್ಕದೆ, ಭಾವನನ್ನು ಬುಟ್ಟಿಗೆ ಹಾಕಿಕೊಂಡಿದ್ದಾಳೆ ಎಂದು ಅಂದುಕೊಳ್ಳದೇ ಇರುವನೇ ಗಿರೀಶ?
ನನ್ನನ್ನು ಅತಿಯಾದ ನೋವಿನಲ್ಲಿ ನೋಡಿದ ನನ್ನ ಗೆಳತಿ ತಾರಾ “ಏನಾಗಿದೆ ನಿನಗೆ? ಹೀಗೇಕೆ ಇದ್ದಿಯಾ?” ಕೇಳುದೇ?!!… ಅಷ್ಟೇ ಸಾಯುವವನಿಗೆ ಹುಲ್ಲು ಕಡ್ಡಿಯ ಆಶ್ರಯ ಎಂಬಂತೆ ಅಳುತ್ತಾ ಬಾಯಿಯಿಂದ ವಾಂತಿ ಆದಂತೆ ಎಲ್ಲಾ ವಿಚಾರಗಳು ನನಗೆ ಅರಿವಿಲ್ಲದಂತೆ ಅವಳ ಮುಂದೆ ಹೊರಬಿದ್ದಿತ್ತು. ಆಮೇಲೆ ಗೊತ್ತಾಯ್ತು ತಾರಾಳ ಮೂಲಕ ಇದನ್ನು ಕೇಳಿಸಿದ್ದು ರವಿ ಎಂದು. ತಾರಾಳ ಮನೆಯಲ್ಲಿ ಅವಳಿಗೆ ಗಂಡು ನೋಡಿದ್ದರು, ಅವಳು ಅವನ ಜೊತೆ ಸಮಯ ಕಳೆಯುತ್ತಿದ್ದುದರಿಂದ ಅವಳು ನಮ್ಮಿಂದ ಸ್ವಲ್ಪ ದೂರವಾದಳು. ರವಿ ಮಾತ್ರ ದಿನಾ ಸಾಂತ್ವನದ ಮಾತುಗಳನ್ನು ಹೇಳುತ್ತಾ ಕತ್ತಲಲ್ಲಿದ್ದ ನನಗೆ ಬೆಳಕಾಗುತ್ತಿದ್ದ . ನನ್ನ ಮನಸ್ಸಿನ ಎಲ್ಲಾ ದುಗುಡ ದುಮ್ಮಾನಗಳನ್ನು ಅವನಲ್ಲಿ ಹೇಳಿಕೊಳ್ಳುವಷ್ಟು ಅವನು ಮನಸ್ಸಿಗೆ ಹತ್ತಿರವಾಗಿದ್ದ. ಬರಗಾಲದ ಭೂಮಿಯ ಮೇಲೆ ಮಳೆಯ ಸಿಂಚನದಂತಿತ್ತು ಅವನ ಇರುವಿಕೆ ನನಗೆ. ಮನಸಿಗೆ ಅವನು ತುಂಬಾ ಹತ್ತಿರವಾಗಿ ಬಿಟ್ಟ.

ದಿನಗಳು ಹೇಗೆ ಓಡಿದವೆಂದರೆ ಕಣ್ಣು ಮುಚ್ಚಿ ಒಡೆಯುವುದರೊಳಗೆ ಬಿ ಎಡ್ ಮುಗಿಯಿತು ಎಂದೆನಿಸಿತ್ತು . ಕೋರ್ಸು ಮುಗಿಯುತ್ತಿದ್ದಂತೆ ನನಗೆ ಟೀಚರ್ ಆಗಿ ಕೆಲಸವೂ ಸಿಕ್ಕಿತು. ಶಾಲೆಯ ಹಾಸ್ಟೆಲ್ ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯನ್ನು ಅವರು ಒದಗಿಸಿದ್ದರು.ಇವುಗಳೆಲ್ಲದರ ನಡುವೆ ಗೋಪಾಲನ ಬ್ಲಾಕ್ ಮೇಲು ನಿರಂತರ ಚಾಲ್ತಿಯಲ್ಲಿತ್ತು.
ಕೆಲಸಕ್ಕೆ ಸೇರಿ,ಇವುಗಳೆಲ್ಲವನ್ನು ಎದುರಿಸುತ್ತಾ ಸುಮಾರು ಆರು ತಿಂಗಳಗಳು ಕಳೆದವು. ಗಿರೀಶ, ನನ್ನ ಸಂಪರ್ಕ ಪೂರ್ಣವಾಗಿ ಕಳಕೊಂಡಿದ್ದ, ಏಕೆಂದರೆ ಅವನಿಗೆ ತಪ್ಪಿತಸ್ಥ ಮನೋಭಾವ ಇತ್ತು.ಆದರೆ ರವಿ ನಿರಂತರ ಸಂಪರ್ಕದಲ್ಲಿದ್ದ, ಯಾವಾಗ್ಲೂ ನನ್ನನ್ನು ಅರಿತುಕೊಳ್ಳುತ್ತಿದ್ದ . ನಮ್ಮ ಸ್ನೇಹ ಪ್ರೀತಿಗೆ ಬದಲಾಗಿತ್ತು . ಒಬ್ಬರನ್ನ ಒಬ್ಬರು ಬಿಟ್ಟಿರಲಾರದಷ್ಟು ಆಳವಾಗಿ ಬಿಟ್ಟಿತ್ತು ನಮ್ಮ ಅನುಬಂಧ. ಏನೇ ಆಗಲಿ ರವಿ ನನ್ನ ಜೊತೆ ಇದ್ದಾನೆ ಎಂಬ ಭಾವ ನನ್ನನ್ನು ಅಂತರಂಗದಿಂದಲೇ ಗಟ್ಟಿಯಾಗಿಸುತ್ತಿತ್ತು.
ನನ್ನ ತಾಳ್ಮೆಗೆ ಒಂದು ಮಿತಿ ಇದೆ ಅಲ್ಲವೇ? ಎಲ್ಲಾದಕ್ಕೊಂದು ಅಂತ್ಯ ಹಾಡಲೇ ಬೇಕೆಂದು ಡೈವೋರ್ಸ್ ಗೆ ಅಪ್ಲೈ ಮಾಡಿದೆ . ಗಿರೀಶ ಸಂಬಂಧ ಕಡಿದುಕೊಳ್ಳಲು ತಯಾರಿದ್ದರೂ, ಅವನ ಅಕ್ಕ,ಭಾವ ಇದಕ್ಕೆ ತಯಾರಿರಲಿಲ್ಲ. ಭಾವ ಅಂತೂ ಸುತರಾಮ್ ಒಪ್ಪಿಗೆ ಕೊಡುತ್ತಿರಲಿಲ್ಲ. ಎಲ್ಲರ ಎದುರಿಗೆ, ಸಮಾಜದಲ್ಲಿ “ನಮ್ಮ ಮರ್ಯಾದಿ ಏನಾಗಬೇಕು?” ಎನ್ನುತ್ತಿದ್ದ. ಆದರೆ ಸ್ತ್ರೀ ಲಂಪಟನಾಗಿದ್ದ ಅವನ ಅಹಂಗೆ ಪೆಟ್ಟಾಗಿತ್ತು. ನನ್ನ ಬಗ್ಗೆ ಕೆಟ್ಟ ಮಾತುಗಳನ್ನು ಎಲ್ಲರಲ್ಲೂ ಹೇಳಲು ಆರಂಭಿಸಿದ್ದ.
ನನ್ನ ಬಗ್ಗೆ ಅರಿತಿದ್ದ ಗಿರೀಶ, ಕೆಲವು ಸಮಯಗಳ ನಂತರ, ಅಕ್ಕ ಭಾವನಿಗೆ ಹೇಳದೆ ಒಂದು ದಿನ ಡೈವೋರ್ಸ್ ಪೇಪರಿಗೆ ಸೈನ್ ಮಾಡಿ ಬಿಟ್ಟ. ವಿಷಯ ತಿಳಿದ ಗೋಪಾಲ ಹಾಗೂ ಗಿರಿಜಾ ಹಾವಿನ ಹುತ್ತಕ್ಕೆ ಕೈ ಹಾಕಿದಂತೆ ಬುಸುಗುಟ್ಟುತ್ತಿದ್ದರು. ಸುಮಾರು ವರ್ಷಗಳ ನಂತರ ನನಗಾಗ ಸ್ವಾತಂತ್ರ್ಯ ಸಿಕ್ಕಿತ್ತು. ಜಾತಿ ಬೇರೆ ಆದರೆ ಏನಂತೆ, ತನ್ನೆಲ್ಲ ಕಷ್ಟಗಳಿಗೆ ಸಹಕಾರಿಯಾಗಿ ನಿಂತ ರವಿಯನ್ನು ನಾನು ಮದುವೆಯಾದೆ . ನನ್ನ ಮನೆಯವರ ಸಂಬಂಧವನ್ನು ಬಿಟ್ಟು ನಾನಿಂದು ಬದುಕುತ್ತಿದ್ದೇನೆ. ಕೆಲವು ವರ್ಷಗಳಿಗೆ ಮಕ್ಕಳು ಬೇಡವೆಂದು ನಾನು ನಿರ್ಧರಿಸಿ ಅದರ ಬಗ್ಗೆ ರವಿಯಲ್ಲಿ ಹೇಳಿದಾಗ ಅವನು ಸಹಕರಿಸಿದ್ದ. ಮದುವೆಯಾಗಿ 5 ವರ್ಷಗಳ ನಂತರ ನಾನು ಪಿಂಕಿಯ ಅಮ್ಮನಾದೆ. ಹಾಗೂ ಈಗ ಸಂತೋಷವಾಗಿಯೂ ಇದ್ದೇನೆ. ನನ್ನ ಎಲ್ಲಾ ಭಾವನೆಗಳಿಗೆ ಸ್ಪಂದಿಸಿ, ಸಹಕರಿಸಿ, ನನಗೆ ಬೆನ್ನೆಲುಬಾಗಿ ನಿಂತ ರವಿಯ ಸಹಾಯವನ್ನು ನಾನು ಹೇಗೆ ತಾನೇ ಮರೆಯಲಿ?! ನನ್ನ ಸ್ವಂತ ನಿರ್ಧಾರ ನನ್ನನ್ನು ಸರಿ ದಾರಿಯಲ್ಲಿ ನಡೆಸಿತು ಎಂಬ ಹೆಮ್ಮೆ ಇದೆ ನನಗೆ.
ಧರ್ಮ, ಅರ್ಥ, ಕಾಮ, ಮೋಕ್ಷ ಇವು ಸನಾತನ ಧರ್ಮದ ನಾಲ್ಕು ಸ್ಥoಭಗಳು. ಇವು ಎಲ್ಲವುಗಳಿಗೂ ಸಮಾನವಾದ ಸ್ಥಾನಮಾನ ಕೊಡಬೇಕು ಎಂಬುದು ಧರ್ಮಸೂತ್ರ. ಯಾವುದಾದರೂ ಒಂದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೆ ಅನಾಹುತ ತಪ್ಪಿದ್ದಲ್ಲ.
✍✍ಭಾರತಿ ನೀರ್ಪಾಜೆ


