ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುತು ಸಿಗದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದ್ದು, ಮೃತರ ಗುರುತು ಪತ್ತೆ ಮಾಡಲು ಸಾರ್ವಜನಿಕರ ಸಹಕಾರವನ್ನು ಕಡಬ ಪೊಲೀಸರು ಕೋರಿದ್ದಾರೆ.
ಪೊಲೀಸ್ ಮಾಹಿತಿಯ ಪ್ರಕಾರ, ಮಾರ್ಚ್ 6ರಂದು ಮಧ್ಯಾಹ್ನ ಸುಮಾರು 1.20 ಗಂಟೆಯ ವೇಳೆಗೆ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಬಿಳಿನೆಲೆ ಜಂಕ್ಷನ್ ಸಮೀಪದ ಅಂಗಡಿಯ ಬಳಿ ಒಬ್ಬ ವ್ಯಕ್ತಿ ಅಸ್ವಸ್ಥಗೊಂಡು ಮಲಗಿರುವ ಸ್ಥಿತಿಯಲ್ಲಿ ಕಂಡುಬಂದಿದ್ದರು. ಸ್ಥಳೀಯರ ಸಹಾಯದಿಂದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತ ವ್ಯಕ್ತಿಯ ವಯಸ್ಸು ಸುಮಾರು 35 ರಿಂದ 40 ವರ್ಷಗಳ ನಡುವೆ ಎಂದು ಅಂದಾಜಿಸಲಾಗಿದ್ದು, ಸಣ್ಣ ಮೈಕಟ್ಟು, ಕಪ್ಪು ಮೈಬಣ್ಣ, ಮುಖದಲ್ಲಿ ದಾಡಿ ಇದ್ದು, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ಸಂಬಂಧಿಕರು ಇದ್ದರೆ ಕಡಬ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಸಂಪರ್ಕಿಸಲು: 9480805364
ಇ-ಮೇಲ್: kadabamaq@ksp.gov.in