ಉಪ್ಪಿನಂಗಡಿ: ಸಮೀಪದ ಕಲ್ಲೇರಿ ಪ್ರದೇಶದಲ್ಲಿ ದ್ವಿಚಕ್ರ ವಾಹನಕ್ಕೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಐದು ವರ್ಷದ ಬಾಲಕಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ದುರ್ಘಟನೆ ಸಂಭವಿಸಿದೆ.
ಮೃತ ಬಾಲಕಿಯನ್ನು ಸುಹೈರಾ (5) ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ತಾಯಿ ಸಾಜಿರಾ (33) ಮತ್ತು ಅಜ್ಜ ಇಸ್ಮಾಯಿಲ್ (60) ಸೇರಿದ್ದಾರೆ.
ತಣ್ಣಿರುಪಂತ ಗ್ರಾಮದ ಕೊಡಂಗೆ ನಿವಾಸಿ ಇಸ್ಮಾಯಿಲ್ ಅವರು ತಮ್ಮ ಮಗಳು ಸಾಜಿರಾ ಹಾಗೂ ಮೊಮ್ಮಗಳು ಸುಹೈರಾ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಕಲ್ಲೇರಿಯಿಂದ ಕುಪ್ಪೆಟ್ಟಿಗೆ ಪ್ರಯಾಣಿಸುತ್ತಿದ್ದ ವೇಳೆ, ವೇಣೂರು ಮೂಲದ ಶಿವಪ್ರಸಾದ್ ಚಾಲನೆ ಮಾಡುತ್ತಿದ್ದ ಕಾರು ವಿರುದ್ಧ ದಿಕ್ಕಿನಿಂದ ಬಂದು ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಬಾಲಕಿ ಸುಹೈರಾ ಗಂಭೀರವಾಗಿ ಗಾಯಗೊಂಡಿದ್ದರೆ, ಸಾಜಿರಾ ಮತ್ತು ಇಸ್ಮಾಯಿಲ್ ಅವರಿಗೂ ಗಾಯಗಳಾಗಿವೆ. ಕೂಡಲೇ ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಗಂಭೀರ ಗಾಯಗಳಿಂದ ಬಳಲುತ್ತಿದ್ದ ಸುಹೈರಾ ಸೋಮವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.