ಬಿಜೆಪಿ ನೇತೃತ್ವದ ಎನ್‌ಡಿಎ ಮಂಜೇಶ್ವರ ಮಂಡಲ ಚುನಾವಣಾ ಕಾರ್ಯಾಲಯವು ಉಪ್ಪಳದ ಸೋಂಕಾಲಿನಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಕೇಂದ್ರ ಉದ್ಯೋಗ ಖಾತೆ ಸಹ ಸಚಿವೆ ಹಾಗೂ ಕೇರಳ ವಿಧಾನಸಭಾ ಚುನಾವಣೆಯ ಕೋಝಿಕ್ಕೋಡ್ ವಲಯ ಉಸ್ತುವಾರಿ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಇನ್ನುಳಿದ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ಮಂಜೇಶ್ವರದಲ್ಲಿ ಪಕ್ಷವನ್ನು ಗೆಲ್ಲಿಸಬೇಕು. ಕೇರಳದಲ್ಲಿ ಈ ಬಾರಿ ಬಿಜೆಪಿ ನಿರ್ಣಾಯಕ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದೆ. ಪ್ರಬಲ ತೃತೀಯ ಶಕ್ತಿಯಾಗಿ ಬೆಳೆಯುವುದು ನಿಶ್ಚಿತ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ M. L. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಸಂಭಾವ್ಯ ಅಭ್ಯರ್ಥಿ K. ಸುರೇಂದ್ರನ್ , ಮಂಗಳೂರು ಉತ್ತರ ಶಾಸಕ Dr. ಭಾರತ್ ಶೆಟ್ಟಿ , ಕೋಝಿಕ್ಕೋಡ್ ವಲಯಾಧ್ಯಕ್ಷ K. ಶ್ರೀಕಂಠ , ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.
ಇದೇ ವೇಳೆ ರಾಜ್ಯ ಸಮಿತಿ ಸದಸ್ಯರು, ಜಿಲ್ಲಾ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು..