ಮೂಡುಬಿದಿರೆ: ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಹಿನ್ನೆಲೆ ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಬಿ ಜಿ ಅವರನ್ನು ಅಮಾನತುಗೊಳಿಸಲಾಗಿದೆ.
ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದಾಗಿ ಆರೋಪಿಸಿ ಆಡಿಯೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ತನಿಖೆ ನಡೆಸಲು ಮಂಗಳೂರು ಉತ್ತರ ಉಪವಿಭಾಗದ ಎಸಿಪಿಗೆ ಸೂಚಿಸಲಾಗಿತ್ತು. ಅವರಿಂದ ಸಲ್ಲಿಸಲಾದ ತನಿಖಾ ವರದಿಯ ಆಧಾರದ ಮೇಲೆ ಅಮಾನತು ಕ್ರಮ ಜಾರಿಗೊಳಿಸಲಾಗಿದೆ.
ಇದಕ್ಕೂ ಮೊದಲು ಬೆಳುವಾಯಿಯ ಪ್ರಫುಲ್ಲ ನಾಯಕ್ ದೂರು ನೀಡಿದ್ದು, ಅದರ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಇನ್ಸ್‌ಪೆಕ್ಟರ್ ವಿರುದ್ಧ ತನ್ನ ಸಹೋದರಿ ಸುಮತಿ ನಾಯ್ಕ್ ಮಾಡಿದ ಆರೋಪಗಳು ಸುಳ್ಳು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸುಮತಿ ಮತ್ತು ಪ್ರಫುಲ್ಲಾ ನಾಯ್ಕ್ ನಡುವೆ ಕೌಟುಂಬಿಕ ಕಲಹಗಳಿರುವುದಾಗಿ ತಿಳಿದುಬಂದಿದ್ದು, ಸುಮತಿ ಹಾಗೂ ಅವರ ಸಹೋದರಿಯ ವಿರುದ್ಧ ತಲಾ ಎರಡು ಪ್ರಕರಣಗಳು ದಾಖಲಾಗಿವೆ. ಇನ್ಸ್‌ಪೆಕ್ಟರ್ ವಿರುದ್ಧ ದಾಖಲಾದ ಪ್ರಕರಣ ಸೇರಿದಂತೆ ಒಂದು ಪ್ರಕರಣ ತನಿಖೆಯಲ್ಲಿದ್ದು, ಉಳಿದ ಪ್ರಕರಣಗಳಿಗೆ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ತಿಳಿಸಲಾಗಿದೆ.
ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರು ಪ್ರಕಟಣೆ ನೀಡಿದ್ದು, ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.