ಕಾಸರಗೋಡು: ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 11,00,036 ಮತದಾರರಿದ್ದು, ಇವರಲ್ಲಿ 5,57,163 ಮಹಿಳೆಯರು, 5,42,861 ಪುರುಷರು ಹಾಗೂ 12 ಟ್ರಾನ್ಸ್ಜೆಂಡರ್ ಮತದಾರರು ಸೇರಿದ್ದಾರೆ. ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 1,141 ಮತಗಟ್ಟೆಗಳು ಸ್ಥಾಪಿಸಲಾಗಿದ್ದು, ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಕ್ಷೇತ್ರವಾರು ಮತಗಟ್ಟೆಗಳ ವಿವರದಲ್ಲಿ ಮಂಜೇಶ್ವರ – 229, ಕಾಸರಗೋಡು – 218, ಉದುಮ – 217, ಕಾಞಂಗಾಡು – 239 ಹಾಗೂ ತ್ರಿಕರಿಪುರ – 218 ಮತಗಟ್ಟೆಗಳು ಸೇರಿವೆ. ಮಂಜೇಶ್ವರ ಮತ್ತು ಕಾಸರಗೋಡು ಕ್ಷೇತ್ರಗಳ ಚುನಾವಣಾ ಸಾಮಗ್ರಿ ವಿತರಣೆ ಏಪ್ರಿಲ್ 8ರಂದು ಬೆಳಿಗ್ಗೆ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನಡೆಯಲಿದೆ.
ಚುನಾವಣೆಗೆ 1,141 ವಿವಿಪ್ಯಾಟ್ (VVPAT) ಯಂತ್ರಗಳು ಅಗತ್ಯವಿದ್ದು, ಹೆಚ್ಚುವರಿ 20 ಶೇಕಡಾ ಯಂತ್ರಗಳನ್ನು ಸಿದ್ಧವಾಗಿಡಲಾಗಿದೆ. ಜಿಲ್ಲೆಯಲ್ಲಿ 238 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮಂಜೇಶ್ವರದಲ್ಲಿ 36 ಹಾಗೂ ಕಾಸರಗೋಡು ಕ್ಷೇತ್ರದಲ್ಲಿ 57 ಅತಿ ಸೂಕ್ಷ್ಮ ಮತಗಟ್ಟೆಗಳಿವೆ.
ಚುನಾವಣಾ ಕರ್ತವ್ಯಕ್ಕಾಗಿ ಒಟ್ಟು 5,480 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಮೊದಲ ಬಾರಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದಲ್ಲದೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ಮತಗಟ್ಟೆಯನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಲಿದ್ದು, ಮತದಾನ ಮಾಡಲು ಫೋಟೋ ಗುರುತಿನ ಚೀಟಿ ಕಡ್ಡಾಯವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ 4,292 ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತದಾನ ಮಾಡುವ ವಿಶೇಷ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.