ಮಂಜೇಶ್ವರ: ಪವಿತ್ರ ರಮಝಾನ್ ತಿಂಗಳ ಉಪವಾಸ ವ್ರತಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಮಂಜೇಶ್ವರದ ಮುಸ್ಲಿಂ ಬಾಂಧವರು ಇಂದು ಭಕ್ತಿಭಾವ ಹಾಗೂ ಸಂಭ್ರಮದಿಂದ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಿದರು.
ತಾಲೂಕಿನಾದ್ಯಂತ ಜುಮಾ ಮಸೀದಿಗಳು ಹಾಗೂ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ, ಧಾರ್ಮಿಕ ಪ್ರವಚನಗಳು ಮತ್ತು ಶುಭಾಶಯ ವಿನಿಮಯ ಕಾರ್ಯಕ್ರಮಗಳು ನಡೆದವು. ಹಬ್ಬದ ಅಂಗವಾಗಿ ನೆರೆಮನೆಯವರ ಹಾಗೂ ಬಂಧುಗಳ ಮನೆಗಳಿಗೆ ಭೇಟಿ ನೀಡಿ ಪರಸ್ಪರ ಸೌಹಾರ್ದತೆ ಪ್ರದರ್ಶಿಸಲಾಯಿತು.
ಶುಕ್ರವಾರ ಮುಂಜಾನೆಯೇ ಹೊಸ ವಸ್ತ್ರ ಧರಿಸಿದ ಭಕ್ತಾದಿಗಳು ಉದ್ಯಾವರ ಜುಮಾ ಮಸೀದಿ, ದಾರುಸ್ಸಲಾಂ ಸಲಫಿ ಮಸೀದಿ, ಕುಂಜತ್ತೂರು ಮಸ್ಜಿದುನ್ನೂರು, ಪೊಸೋಟು ಜುಮಾ ಮಸೀದಿ ಸೇರಿದಂತೆ ಹೊಸಬೆಟ್ಟು, ಹೊಸಂಗಡಿ ಪ್ರದೇಶಗಳ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿ, ವಿಶ್ವಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಕುಂಜತ್ತೂರು ದಾರುಸ್ಸಲಾಂ ಸಲಫಿ ಮಸೀದಿಯ ಅಧೀನದ ಈದ್ಗಾದಲ್ಲಿ ನಡೆದ ನಮಾಝ್‌ಗೆ ಮೊಹಮ್ಮದಲಿ ಸಲಫಿ ನೇತೃತ್ವ ನೀಡಿ ಖುತ್ಬಾ ನಿರ್ವಹಿಸಿದರು. “ಈ ಹಬ್ಬವು ಕೇವಲ ಆಚರಣೆಯಲ್ಲ, ತಾಳ್ಮೆ, ದಾನ ಮತ್ತು ಮಾನವೀಯತೆಯ ಮಹತ್ವವನ್ನು ಸಾರುವ ಪವಿತ್ರ ದಿನವಾಗಿದೆ,” ಎಂದು ಅವರು ಸಂದೇಶ ನೀಡಿದರು.
ಪ್ರಾರ್ಥನೆ ಬಳಿಕ ಪರಸ್ಪರ ಆಲಿಂಗಿಸಿ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ದೃಶ್ಯಗಳು ಎಲ್ಲೆಡೆ ಕಂಡುಬಂದವು. ಜಾತಿ-ಧರ್ಮ ಭೇದವಿಲ್ಲದೆ ಸ್ನೇಹಿತರು ಹಾಗೂ ಹಿತೈಷಿಗಳು ಮುಸ್ಲಿಂ ಬಾಂಧವರ ಮನೆಗಳಿಗೆ ಭೇಟಿ ನೀಡಿ ಹಬ್ಬದ ಶುಭಾಶಯ ಕೋರಿದರು.
ಹಬ್ಬದ ಅಂಗವಾಗಿ ಬಡವರಿಗೆ ‘ಫಿತರ್ ಝಕಾತ್’ ವಿತರಿಸಲಾಯಿತು. ಮನೆ ಮನೆಗಳಲ್ಲಿ ಶ್ಯಾವಿಗೆ ಪಾಯಸ ಹಾಗೂ ಬಿರಿಯಾನಿ ಸವಿಯು ಹಬ್ಬದ ಸಡಗರವನ್ನು ಮತ್ತಷ್ಟು ಹೆಚ್ಚಿಸಿತು. ಹೊಸ ಬಟ್ಟೆ ಧರಿಸಿ ಹಿರಿಯರಿಂದ ‘ಈದಿ’ ಪಡೆದ ಮಕ್ಕಳ ಸಂಭ್ರಮ ಮುಗಿಲುಮುಟ್ಟಿತ್ತು.
ಒಟ್ಟಾರೆಯಾಗಿ ಮಂಜೇಶ್ವರ ಪಟ್ಟಣವು ಹಬ್ಬದ ಸಂಭ್ರಮದಲ್ಲಿ ಮದುವಣಗಿತ್ತಿಯಂತೆ ಕಂಗೊಳಿಸಿದ್ದು, ಈದುಲ್ ಫಿತ್ರ್ ಆಚರಣೆ ಭಾವೈಕ್ಯತೆ ಹಾಗೂ ಪ್ರೀತಿಯ ಸಂಕೇತವಾಗಿ ಮೂಡಿಬಂದಿತು.