ಉಪ್ಪಳ: ಕಾರ್ಗಿಲ್ ವಿಜಯ ಭಾರತದ ಸೇನಾ ಇತಿಹಾಸದ ಸುವರ್ಣ ಅಧ್ಯಾಯ – ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್

ಉಪ್ಪಳ, ಜು. 28: ರಾಷ್ಟ್ರ ಸಂರಕ್ಷಣೆ ಎಂಬುದು ಕೇವಲ ಸೈನಿಕರ ಹೊಣೆಗಾರಿಕೆಯಲ್ಲ, ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ಪ್ರತಿಯೊಬ್ಬ ನಾಗರಿಕ ರಾಷ್ಟ್ರಭಾವನೆಯನ್ನು ಬೆಳೆಸಿದಾಗ ಮಾತ್ರ ಸದೃಢ ಮತ್ತು ಸಂತುಷ್ಟ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಪರಮ ವೀರ ಚಕ್ರ ಪುರಸ್ಕೃತ, ಜೀವಂತ ದಂತಕಥೆ ಸುಬೇದಾರ್ ಮೇಜರ್ ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್ ಹೇಳಿದರು.

ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಗಾಯತ್ರೀ ಮಂಟಪದಲ್ಲಿ ಭಾನುವಾರ ನಡೆದ ಕಾರ್ಗಿಲ್ ವಿಜಯ ದಿವಸ್ ಸಮಾರಂಭದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಾರ್ಗಿಲ್ ಯುದ್ಧವು ಭಾರತದ ಸೇನಾ ಇತಿಹಾಸದ ಅತ್ಯುನ್ನತ ವಿಜಯಗಳಲ್ಲಿ ಒಂದಾಗಿದ್ದು, ಕಾಶ್ಮೀರದ ದ್ರಾಸ್, ಕಾರ್ಗಿಲ್, ಎಲ್‌ಒಸಿ, ಪುಲ್ವಾಮಾ, ಕುಪ್ವಾರಾ, ಅನಂತನಾಗ್, ಕುಲ್ಗಾಮ್ ಹಾಗೂ ಬಾರಾಮುಲ್ಲ ಸೇರಿದಂತೆ ಉಗ್ರ ಚಟುವಟಿಕೆ ಹೆಚ್ಚಿದ್ದ ಪ್ರದೇಶಗಳಲ್ಲಿ ಭಾರತೀಯ ಸೇನೆಯ ಧೈರ್ಯಶಾಲಿ ಕಾರ್ಯಾಚರಣೆಗಳಿಂದ ಭಯೋತ್ಪಾದಕರಿಗೆ ತಲೆ ಎತ್ತಲು ಅವಕಾಶವಿಲ್ಲದಂತಾಗಿದೆ ಎಂದು ಅವರು ತಿಳಿಸಿದರು.

1999ರ ಕಾರ್ಗಿಲ್ ಯುದ್ಧದ ವೇಳೆ ಘಾತಕ್ ಕಮಾಂಡೋ ತಂಡದೊಂದಿಗೆ ಟೈಗರ್ ಹಿಲ್ ಬಂಕರ್‌ಗಳನ್ನು ಧ್ವಂಸಗೊಳಿಸಲು ಕೈಗೊಂಡ ಕಾರ್ಯಾಚರಣೆಯನ್ನು ಸ್ಮರಿಸಿದ ಅವರು, ಕಡಿದಾದ ಹಿಮಪರ್ವತಗಳನ್ನು ಏರಿ, ತೀವ್ರ ಗುಂಡಿನ ದಾಳಿಯ ನಡುವೆಯೂ ಕಾರ್ಯಾಚರಣೆ ಯಶಸ್ವಿಗೊಳಿಸಿದ ಅನುಭವವನ್ನು ಹಂಚಿಕೊಂಡರು. 15ಕ್ಕೂ ಹೆಚ್ಚು ಗುಂಡೇಟು ತಗುಲಿದ್ದರೂ ಹೋರಾಟ ಮುಂದುವರಿಸಿ ಶತ್ರುಗಳ ಬಂಕರ್‌ಗಳನ್ನು ನಾಶಪಡಿಸಿದ ಘಟನೆಯನ್ನು ವಿವರಿಸಿದರು.

16 ತಿಂಗಳ ಕಾಲ ಜೀವನ–ಮರಣದ ಹೋರಾಟ ನಡೆಸಿ ಬದುಕುಳಿದಿರುವುದು ದೇಶಸೇವೆಯ ಸಂಕಲ್ಪದಿಂದಲೇ ಸಾಧ್ಯವಾಯಿತು. ಈ ಮಣ್ಣಿನ ಋಣ ತೀರಿಸುವ ಉತ್ಸಾಹವೇ ಬದುಕಿಗೆ ಮತ್ತಷ್ಟು ಶಕ್ತಿ ನೀಡುತ್ತದೆ. ಯಾವುದೇ ಪರಿಸ್ಥಿತಿಯಲ್ಲೂ ಧೈರ್ಯ ಕಳೆದುಕೊಳ್ಳದವನೇ ಗೆಲ್ಲುತ್ತಾನೆ. ರಾಷ್ಟ್ರಸೇವೆಗೆ ಸಮರ್ಪಿತ ಜೀವನಕ್ಕೆ ಅಂತ್ಯವಿಲ್ಲ ಎಂದು ಅವರು ಭಾವುಕರಾಗಿ ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ವಹಿಸಿದ್ದರು. ಕೊಂಡೆವೂರು ಮಠಾಧೀಶ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತವು ಶಸ್ತ್ರ ಮತ್ತು ಶಾಸ್ತ್ರ ಎರಡಕ್ಕೂ ಸಮಾನ ಮಹತ್ವ ನೀಡಿದ ದೇಶವಾಗಿದ್ದು, ಯೋಗಿ ಮತ್ತು ಯೋಧನ ಆಶಯಗಳು ರಾಷ್ಟ್ರಸೇವೆಯಲ್ಲೇ ಒಂದಾಗಿವೆ. ಪ್ರತಿಯೊಬ್ಬರೂ ರಾಷ್ಟ್ರ ಚಿಂತನೆಯನ್ನು ಬೆಳೆಸಬೇಕು ಎಂದು ಕರೆ ನೀಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!