ದೇರಂಬಳ ಸೇತುವೆ ಸಮಸ್ಯೆಗೆ ಪರಿಹಾರದ ಭರವಸೆ | ನಮ್ಮ ಮೀಡಿಯಾ 24×7 ವರದಿಗೆ ಸ್ಪಂದನೆ

​ನಾಲ್ಕು ವರ್ಷಗಳಿಂದ ಎರಡು ಪಂಚಾಯತ್‌ಗಳ ಜನರ ಸಂಚಾರಕ್ಕೆ ತೀವ್ರ ತೊಂದರೆ ಉಂಟು ಮಾಡಿದ್ದ ಈ ಸಮಸ್ಯೆಗೆ ಇದೀಗ ಪರಿಹಾರದ ಭರವಸೆ ದೊರೆತಿದೆ.ಜನರ ಸಮಸ್ಯೆಯನ್ನು ನೇರವಾಗಿ ಬಿಂಬಿಸಿದ್ದ ನಮ್ಮ ಮೀಡಿಯಾ 24×7 ವರದಿಗೆ ಸ್ಪಂದಿಸಿರುವ ಶಾಸಕ ಎಕೆಎಂ ಅಶ್ರಫ್, ಶಾಶ್ವತ ವಾಹನ ಸಂಚಾರದ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಮೀಂಜ-ಮಂಗಲ್ಪಾಡಿ ಗ್ರಾಮ ಪಂಚಾಯತ್‌ಗಳನ್ನು ಸಂಪರ್ಕಿಸುವ ದೇರಂಬಳ ಹೊಳೆಯ ಸೇತುವೆ ಕಳೆದ ನಾಲ್ಕು ವರ್ಷಗಳಿಂದ ಶಿಥಿಲಗೊಂಡು ಬಳಕೆಗೆ ಅಸಾಧ್ಯವಾಗಿತ್ತು.ಮಳೆಗಾಲದಲ್ಲಿ ಹೊಳೆಯ ನೀರಿನ ಪ್ರಮಾಣ ಹೆಚ್ಚಾದಾಗ ವಿದ್ಯಾರ್ಥಿಗಳು, ರೈತರು ಹಾಗೂ ಸ್ಥಳೀಯರು ಜೀವದ ಹಂಗು ತೊರೆದು ಸಂಚರಿಸುವ ಪರಿಸ್ಥಿತಿ ಎದುರಾಗಿತ್ತು.


ಇತ್ತೀಚೆಗೆ ಇದೇ ಭಾಗದಲ್ಲಿ ವಿದ್ಯಾರ್ಥಿನಿಯೊಬ್ಬಳು ಪ್ರವಾಹದ ನೀರಿಗೆ ಬಿದ್ದು, ಸ್ಥಳೀಯ ವ್ಯಕ್ತಿ ಉದಯಕುಮಾರ್ ಶೆಟ್ಟಿ ಅವರ ಸಮಯೋಚಿತ ರಕ್ಷಣೆಯಿಂದ ಪಾರಾಗಿದ್ದ ಘಟನೆ ಕೂಡ ನಡೆದಿತ್ತು.

ಈ ಗಂಭೀರ ಸಮಸ್ಯೆಯನ್ನು ಗುರುತಿಸಿದ ನಮ್ಮ ಮೀಡಿಯಾ 24×7 ತಂಡ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಅಹವಾಲುಗಳನ್ನು ಸಂಗ್ರಹಿಸಿ, ದೇರಂಬಳ ಸೇತುವೆಯ ದುಸ್ಥಿತಿಯ ಬಗ್ಗೆ ವರದಿ ಪ್ರಸಾರ ಮಾಡಿತ್ತು.
ಜನರ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ನಮ್ಮ ವರದಿ ಪ್ರಮುಖ ಪಾತ್ರ ವಹಿಸಿತ್ತು.

ಇದೀಗ ಶಾಸಕ ಎಕೆಎಂ ಅಶ್ರಫ್ ಅವರು ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.


ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಸೇತುವೆ ನಿರ್ಮಾಣ ಯೋಜನೆಯನ್ನು ಸೇರಿಸಿ, ಶೀಘ್ರದಲ್ಲೇ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!