ಕಲ್ಲಡ್ಕ–ಬೋಳಂತೂರು ರಸ್ತೆಯಲ್ಲಿ ಕಸದ ರಾಶಿ: ಪಾದಚಾರಿಗಳಿಗೆ ಸಂಕಷ್ಟ

ಬಂಟ್ವಾಳ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯ ಪ್ರಶ್ನೆ ಮತ್ತೆ ಮುಂದೇಳಿರುವ ನಡುವೆಯಲ್ಲಿ, ಕಲ್ಲಡ್ಕ–ಬೋಳಂತೂರು ರಸ್ತೆಯಲ್ಲಿ ಕಸದ ರಾಶಿ ಪಾದಚಾರಿಗಳಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.

ಗೋಳ್ತಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಳಂತೂರು ಭಾಗದಲ್ಲಿ ರಸ್ತೆ ಬದಿಯಲ್ಲಿ ರಾಶಿರಾಶಿ ಕಸ, ಕೊಳೆತ ತ್ಯಾಜ್ಯ, ಪ್ಲಾಸ್ಟಿಕ್ ಬಾಟಲಿಗಳು ಹಾಗೂ ವಿವಿಧ ಬಣ್ಣದ ಚೀಲಗಳು ತುಂಬಿಕೊಂಡಿರುವ ದೃಶ್ಯಗಳು ಕಂಡು ಬರುತ್ತಿವೆ. ಇದರ ಪರಿಣಾಮವಾಗಿ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯರ ಪ್ರಕಾರ, ನಿಯಮಗಳನ್ನು ಮೀರಿ ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ಎಸೆಯುವ ಪ್ರವೃತ್ತಿ ನಿರಂತರವಾಗಿ ಮುಂದುವರಿಯುತ್ತಿದ್ದು, ಇದು ಪರಿಸರಕ್ಕೂ ಹಾಗೂ ಸಾರ್ವಜನಿಕ ಆರೋಗ್ಯಕ್ಕೂ ಅಪಾಯಕಾರಿಯಾಗಿದೆ.

ಸ್ವಚ್ಛತೆಯನ್ನು ಉತ್ತೇಜಿಸುವ ಉದ್ದೇಶದಿಂದ ದೇಶದ ಮಟ್ಟದಲ್ಲಿ ಜಾರಿಗೊಂಡಿರುವ ‘ಸ್ವಚ್ಛ ಭಾರತ್’ ಪರಿಕಲ್ಪನೆ ನೆಲಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ಬರದಿರುವುದು ಇಂತಹ ಘಟನೆಗಳಿಂದ ಸ್ಪಷ್ಟವಾಗುತ್ತಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇವಲ ಬೋಳಂತೂರು ಭಾಗದಲ್ಲಷ್ಟೇ ಅಲ್ಲದೆ, ಇತರ ಪ್ರದೇಶಗಳಲ್ಲಿಯೂ ಇದೇ ರೀತಿಯ ಸಮಸ್ಯೆಗಳು ಕಂಡುಬರುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!