ಮಂಗಳೂರು: ಬೇಸಿಗೆ ಕಾಲದಲ್ಲಿ ಉಷ್ಣತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾನುವಾರುಗಳ ಆರೋಗ್ಯ ಕಾಪಾಡಲು ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಾವಶ್ಯಕ ಎಂದು ಪಶುಪಾಲನಾ ತಜ್ಞರು ಸೂಚಿಸಿದ್ದಾರೆ.
ಉಷ್ಣತೆಯ ಪರಿಣಾಮ ಕಡಿಮೆಗೊಳಿಸಲು ದನಗಳನ್ನು ಬೆಳಿಗ್ಗೆ ಅಥವಾ ಸಂಜೆ ವೇಳೆಯಲ್ಲಿ ಮಾತ್ರ ಮೇಯಲು ಹೊರಗಡೆ ಬಿಡಬೇಕು. ವಿಶೇಷವಾಗಿ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಜಾನುವಾರುಗಳನ್ನು ಹೊರಗೆ ಬಿಡುವುದನ್ನು ತಪ್ಪಿಸಬೇಕು. ದಿನಪೂರ್ತಿ ತಂಪಾದ ನೀರನ್ನು ಸಮರ್ಪಕವಾಗಿ ನೀಡಬೇಕು. ನೀರಿನ ಕೊರತೆ ಕಂಡುಬಂದಲ್ಲಿ ಸ್ಥಳೀಯ ಸಂಸ್ಥೆಗಳ ಸಹಾಯ ಪಡೆಯುವುದು ಅಗತ್ಯ.
ಜಾನುವಾರುಗಳನ್ನು ಸದಾ ನೆರಳಿನಲ್ಲೇ ಕಟ್ಟಬೇಕು. ಶೆಡ್‌ಗಳ ಮೇಲ್ಛಾವಣಿಗೆ ತೆಂಗಿನ ಅಥವಾ ಅಡಿಕೆ ಗರಿಗಳನ್ನು ಹಾಕುವುದು, ಸ್ಪ್ರಿಂಕ್ಲರ್ ಮೂಲಕ ನೀರು ಚಿಮ್ಮಿಸುವುದು ಅಥವಾ ಬಿಳಿ ಬಣ್ಣದ ಪೇಂಟ್ ಬಳಿಸುವುದರಿಂದ ಉಷ್ಣತೆ ಕಡಿಮೆಗೊಳಿಸಬಹುದು. ಶೆಡ್ ಒಳಗೆ ಫ್ಯಾನ್‌ಗಳನ್ನು ಅಳವಡಿಸಿದರೆ ಇನ್ನಷ್ಟು ತಂಪಿನ ವಾತಾವರಣ ಸೃಷ್ಟಿಯಾಗುತ್ತದೆ.
ಇದಲ್ಲದೆ, ಒದ್ದೆಯಾದ ಗೋಣಿ ಚೀಲಗಳನ್ನು ಶೆಡ್ ಸುತ್ತ ಕಟ್ಟುವುದು ಹಾಗೂ ಪ್ರತಿ ಗಂಟೆಗೆ ಜಾನುವಾರುಗಳ ಮೈ ಮೇಲೆ 1-2 ನಿಮಿಷ ನೀರು ಚಿಮುಕಿಸುವುದರಿಂದ ಉಷ್ಣತೆಯ ತೀವ್ರತೆ ತಗ್ಗಿಸಬಹುದು. ಹೆಚ್ಚಿನ ಆಹಾರವನ್ನು ಬೆಳಿಗ್ಗೆ ಬೇಗ ಮತ್ತು ರಾತ್ರಿ ಹೊತ್ತಿನಲ್ಲಿ ನೀಡುವುದು ಉತ್ತಮ.
ಜಾನುವಾರುಗಳ ಹಾಲಿನ ಉತ್ಪಾದನೆಗೆ ಅನುಗುಣವಾಗಿ ದಿನವೂ 20ರಿಂದ 100 ಗ್ರಾಂ ಲವಣ ಮಿಶ್ರಣವನ್ನು ನೀಡಬೇಕು. ಜಾನುವಾರುಗಳಲ್ಲಿ ಪ್ರಜ್ಞೆ ತಪ್ಪುವುದು ಅಥವಾ ಹಾಲಿನ ಇಳುವರಿ ಅಚಾನಕ್ ಕಡಿಮೆಯಾಗುವುದು ಕಂಡುಬಂದಲ್ಲಿ ತಕ್ಷಣ ಸಮೀಪದ ಪಶುವೈದ್ಯಕೀಯ ಆಸ್ಪತ್ರೆಗೆ ಸಂಪರ್ಕಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.