ನಮ್ಮ ಕರಾವಳಿಯ ಮಣ್ಣಿಗೆ ಒಂದು ವಿಚಿತ್ರ ಗುಣವಿದೆ. ಇಲ್ಲಿ ಅಲೆಗಳ ಸದ್ದಿನಲ್ಲಿ ಸಾಹಿತ್ಯವಿದೆ, ತೆಂಗಿನ ಮರಗಳ ಮರ್ಮರದಲ್ಲಿ ಕವಿತೆಯಿದೆ. ಈ ಮಣ್ಣಿನ ಗಂಧವನ್ನು ಜಗತ್ತಿನಾದ್ಯಂತ ಪಸರಿಸಿದ ಆ ಅಪ್ರತಿಮ ಚೇತನವೇ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು. ಇಂದು ಅವರ ಹುಟ್ಟುಹಬ್ಬ. ಈ ಹೊತ್ತಿನಲ್ಲಿ ಅವರನ್ನೊಮ್ಮೆ ನೆನಪು ಮಾಡಿಕೊಳ್ಳುವುದು ಅಂದರೆ ಅದು ನಮ್ಮ ಅಸ್ಮಿತೆಯನ್ನು ನಾವು ಹುಡುಕಿಕೊಂಡಂತೆ.
ಪೈಗಳೆಂಬ ಜ್ಞಾನದ ಭಂಡಾರ
ಪೈಗಳು ಕೇವಲ ಕವಿಯಲ್ಲ, ಅವರೊಬ್ಬ ಚಲಿಸುವ ವಿಶ್ವಕೋಶ. ಮಂಜೇಶ್ವರದ ಆ ಪುಟ್ಟ ಮನೆಯಲ್ಲಿ ಕುಳಿತು, ಜಗತ್ತಿನ ಹತ್ತಾರು ಭಾಷೆಗಳನ್ನು ಒಲಿಸಿಕೊಂಡು, ಇತಿಹಾಸದ ಆಳಕ್ಕೆ ಇಳಿದು ಸತ್ಯವನ್ನು ಶೋಧಿಸಿದ ರೀತಿ ಅಚ್ಚರಿ ತರುತ್ತದೆ. ಅವರಿಗೆ ಭಾಷೆಯ ಹಂಗಿರಲಿಲ್ಲ, ಜ್ಞಾನದ ಹಸಿವಿತ್ತು. ‘ಗಿಳಿವಿಂಡು’, ‘ಗೊಲ್ಗೊಥಾ’, ‘ವೈಶಾಖ’ದಂತಹ ಕೃತಿಗಳ ಮೂಲಕ ಅವರು ಕಟ್ಟಿಕೊಟ್ಟ ಭಾವಲೋಕ ಇಂದಿಗೂ ನಮಗೆ ದಾರಿದೀಪ.
ನನ್ನದೊಂದು ಪುಟ್ಟ ‘ಆಪಾದನೆ’!
ಇಂದು ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ, ನಾನು ಅವರ ಮೇಲೆ ಒಂದು ಸಣ್ಣ ‘ಆಪಾದನೆ’ ಹೊರಿಸಲು ಬಯಸುತ್ತೇನೆ. ಅದೇನಪ್ಪಾ ಅಂದರೆ— “ಪೈಗಳೇ, ನೀವು ನಮ್ಮನ್ನು ಅತಿಯಾದ ಅಭಿಮಾನಿಗಳನ್ನಾಗಿ ಮಾಡಿಬಿಟ್ಟಿರಿ!” ಹೌದು, ನೀವು ಹಾಕಿಕೊಟ್ಟ ಆ ಭಾಷಾ ಪ್ರೇಮ, ಆ ಶಿಸ್ತು, ಮತ್ತು ಸಂಶೋಧನೆಯ ಹಠ ಇದೆಯಲ್ಲ… ಅದು ಇಂದಿನ ತಲೆಮಾರಿಗೆ ಒಂದು ಸವಾಲು. ನೀವು ಸಾಹಿತ್ಯದ ಮೂಲಕ ನಮ್ಮ ತುಳುನಾಡು ಮತ್ತು ಕನ್ನಡ ನಾಡಿನ ನಡುವೆ ಕಟ್ಟಿದ ಆ ಸೇತುವೆ ಅಷ್ಟು ಗಟ್ಟಿಯಾಗಿದೆ ಎಂದರೆ, ನಮಗೆ ಬೇರೆಲ್ಲೂ ಅಡಿ ಇಡಲು ಮನಸ್ಸೇ ಬರುವುದಿಲ್ಲ. ನೀವು ಮೌನವಾಗಿಯೇ ಅದೆಷ್ಟು ಕ್ರಾಂತಿ ಮಾಡಿಬಿಟ್ಟರೆಂದರೆ, ಇಂದು ನಾವು ಅಕ್ಷರಗಳನ್ನು ಜೋಡಿಸುವಾಗಲೂ ನಿಮ್ಮ ನೆರಳು ನಮ್ಮ ಮೇಲೆ ಬೀಳುತ್ತದೆ. ಇದು ನೀವು ನಮಗೆ ಮಾಡಿದ ‘ಅನ್ಯಾಯ’ವೋ ಅಥವಾ ಕೊಟ್ಟ ‘ವರವೋ’ ನಾನರಿಯೆ!
ಸರಳತೆಯೇ ಸೌಂದರ್ಯ
ಪೈಗಳ ಬದುಕು ನಮಗೆ ಕಲಿಸುವುದು ಸರಳತೆಯನ್ನು. ಅಷ್ಟು ದೊಡ್ಡ ವಿದ್ವಾಂಸರಾಗಿದ್ದರೂ, ಮಂಜೇಶ್ವರದ ಮನೆಯ ಅಂಗಳದಲ್ಲಿ ತಲೆಗೆ ಮುಂಡಾಸು ಸುತ್ತಿ ಸಾಮಾನ್ಯರಂತೆ ಕಾಣುತ್ತಿದ್ದ ಆ ಮಹಾನುಭಾವರ ವ್ಯಕ್ತಿತ್ವವೇ ಒಂದು ಪಾಠ. ಆಡಂಬರವಿಲ್ಲದ ಪಾಂಡಿತ್ಯ, ಅಹಂಕಾರವಿಲ್ಲದ ಅರಿವು—ಇದೇ ಮಂಜೇಶ್ವರ ಗೋವಿಂದ ಪೈಗಳು.
”ಕನ್ನಡದ ಕಂದ ನಾನು, ಕನ್ನಡಿಗ ನಾನು” ಎಂದು ಹೆಮ್ಮೆಯಿಂದ ಸಾರಿದ ಆ ರಾಷ್ಟ್ರಕವಿಯ ಚರಣಗಳಿಗೆ ನಮ್ಮ ಕರಾವಳಿಯ ಭಕ್ತಿಯ ಪ್ರಣಾಮಗಳು. ಪೈಗಳ ಸಾಹಿತ್ಯ ನಮ್ಮ ಮನೆಮನಗಳಲ್ಲಿ ಸದಾ ಹಸಿರಾಗಿರಲಿ.
✍️ ದಯಾನಂದ ರೈ ಕಳ್ವಾಜೆ.