ಕಾಸರಗೋಡು: ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಗೋ-ಕುಟೀರದ ಕಾಮಗಾರಿ ಮತ್ತೊಂದು ಮಹತ್ವದ ಹಂತಕ್ಕೆ ಕಾಲಿಟ್ಟಿದೆ. ಕಳೆದ ನವೆಂಬರ್ 4, 2025ರಂದು ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರಿಂದ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಇದರ ಮೊದಲ ಹಂತದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.
ಇದೀಗ ಎರಡನೇ ಹಂತವಾಗಿ ಮೊದಲ ಅಂತಸ್ತಿನ ಗೋಮೇವು ಸಂಗ್ರಹಾಲಯ ಹಾಗೂ ಮೇಲ್ಛಾವಣಿ ನಿರ್ಮಾಣ ಕಾಮಗಾರಿಗೆ ಮಾರ್ಚ್ 24, 2026ರಂದು ಬೆಳಗ್ಗೆ 9.45ಕ್ಕೆ ರೋಹಿಣಿ ನಕ್ಷತ್ರದ ಶುಭ ಮುಹೂರ್ತದಲ್ಲಿ ಗೋ-ಧಾರ್ಮಿಕ ಪೂಜಾ ಕಾರ್ಯಕ್ರಮದೊಂದಿಗೆ ಚಾಲನೆ ನೀಡಲಾಗುತ್ತಿದೆ. ಈ ಕಾರ್ಯಕ್ರಮವು ಗುರು ಹಿರಿಯರ ಆಶೀರ್ವಾದದೊಂದಿಗೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ವತಿಯಿಂದ ನಡೆಯುತ್ತಿರುವ ಈ ಮಹತ್ವದ ಯೋಜನೆಗೆ ಸ್ಥಳೀಯರ ಸಹಕಾರ ದೊರೆಯುತ್ತಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಾದ ನೀಡುವಂತೆ ಸಾರ್ವಜನಿಕರು ಮತ್ತು ಭಕ್ತರಲ್ಲಿ ಮನವಿ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.