ಪುತ್ತೂರು: ಪ್ರಸ್ತುತ ಇರಾನ್, ಅಮೇರಿಕಾ ಹಾಗೂ ಇಸ್ರೇಲ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದ ಜಾಗತಿಕ ಮಟ್ಟದಲ್ಲಿ ಇಂಧನ, ತೈಲ ಮತ್ತು ನೈಸರ್ಗಿಕ ಅನಿಲದ ಕೊರತೆ ಉಂಟಾಗುತ್ತಿರುವ ಸಂದರ್ಭದಲ್ಲೂ, ಭಾರತದಲ್ಲಿ ಅಡುಗೆ ಅನಿಲ ಸರಬರಾಜು ಸಮರ್ಪಕವಾಗಿ ನಡೆಯುತ್ತಿದೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ದೇಶದ ಪ್ರಧಾನಿ Narendra Modi ಹಾಗೂ ಕೇಂದ್ರ ಇಂಧನ ಸಚಿವ Hardeep Singh Puri ಅವರ ಸೂಕ್ತ ಯೋಜನೆ ಮತ್ತು ವ್ಯವಸ್ಥಿತ ನಿರ್ವಹಣೆಯಿಂದ ದೇಶದ ಜನರಿಗೆ ಯಾವುದೇ ತೊಂದರೆ ಆಗದಂತೆ ಅಡುಗೆ ಅನಿಲವನ್ನು ಪೂರೈಸಲಾಗುತ್ತಿದೆ ಎಂದು ಹೇಳಿದರು. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಅನಿಲದ ಕೊರತೆ ಕಂಡುಬರುತ್ತಿರುವಾಗಲೂ, ಭಾರತದಲ್ಲಿ ಜನರು ತಮ್ಮ ದಿನನಿತ್ಯದ ಅಗತ್ಯಗಳನ್ನು ಸುಗಮವಾಗಿ ನಿರ್ವಹಿಸುತ್ತಿರುವುದು ಕೇಂದ್ರ ಸರ್ಕಾರದ ಕಾರ್ಯಕ್ಷಮತೆಯ ಫಲವಾಗಿದೆ ಎಂದು ಅಭಿಪ್ರಾಯಪಟ್ಟರು.
ಇಂಧನ ಕೊರತೆ ಭೀತಿಯಿಂದ ಕೆಲವರು ಹೆಚ್ಚುವರಿ ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸುವುದು ಹಾಗೂ ಕಾಳಬಜಾರ್‌ನಲ್ಲಿ ಮಾರಾಟ ಮಾಡುವ ಘಟನೆಗಳು ನಡೆಯುತ್ತಿವೆ. ಆದರೆ ಕೇಂದ್ರ ಸರ್ಕಾರ ತುರ್ತಾಗಿ ರಷ್ಯಾ ಸೇರಿದಂತೆ ವಿವಿಧ ದೇಶಗಳಿಂದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುತ್ತಿದ್ದು, ವಿಶೇಷವಾಗಿ ನವ ಮಂಗಳೂರು ಬಂದರಿಗೆ ಹಡಗುಗಳ ಮೂಲಕ ಪೂರೈಕೆ ಹೆಚ್ಚಿಸಿ ಕೊರತೆಯನ್ನು ನಿವಾರಿಸುವ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು.
ಸಾಮಾನ್ಯ ಜನರು ಅಡುಗೆ ಅನಿಲದ ಬಗ್ಗೆ ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಪ್ರತಿಯೊಬ್ಬರಿಗೂ ಅಗತ್ಯವಿರುವ ಪ್ರಮಾಣದಲ್ಲಿ ಗ್ಯಾಸ್ ಪೂರೈಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಹೊತ್ತಿದ್ದು, ವಾಣಿಜ್ಯ ಗ್ಯಾಸ್ ಕೊರತೆಯೂ ಎದುರಾಗುವುದಿಲ್ಲ ಎಂದು ಅವರು ಭರವಸೆ ನೀಡಿದರು. ಜಿಲ್ಲೆಯ ಹೋಟೆಲ್ ಮಾಲಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಆತಂಕಪಡುವ ಅಗತ್ಯವಿಲ್ಲ ಎಂದರು.
ಮುಂದಿನ ದಿನಗಳಲ್ಲಿ ಪುತ್ತೂರು ಜಾತ್ರೆ ಸೇರಿದಂತೆ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಗ್ಯಾಸ್ ಪೂರೈಕೆ ಸಮರ್ಪಕವಾಗಿರುವಂತೆ ಸಂಸದರು ಹಾಗೂ ಬಿಜೆಪಿ ವತಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಜನರು ಅನಗತ್ಯವಾಗಿ ಗ್ಯಾಸ್ ಸಂಗ್ರಹಣೆ ಮಾಡದೆ, ದಿನನಿತ್ಯಕ್ಕೆ ಅಗತ್ಯವಿರುವಷ್ಟನ್ನು ಮಾತ್ರ ಬಳಸಬೇಕು ಎಂದು ಸಂಜೀವ ಮಠಂದೂರು ಮನವಿ ಮಾಡಿದ್ದಾರೆ.