ನಂದಿಗುಡ್ಡೆಯ ‘ಹಲಸಿನ ಹಣ್ಣಿನ ಸರದಾರ’: ರೊನಾಲ್ಡ್ ಅವರ ಯಶೋಗಾಥೆ

ಮಂಗಳೂರು: ಪ್ರಕೃತಿಯ ಅಮೂಲ್ಯ ಕೊಡುಗೆಯಾದ ಹಲಸಿನ ಹಣ್ಣು ಸಾಮಾನ್ಯವಾಗಿ ಮಳೆಗಾಲದ ಆರಂಭದಲ್ಲಿ ಮಾತ್ರ ಲಭ್ಯವಾಗುತ್ತದೆ. ಆದರೆ ಮಂಗಳೂರಿನ ನಂದಿಗುಡ್ಡೆ–ಮಾರ್ನಮಿಕಟ್ಟೆ ರಸ್ತೆ ಬದಿಯಲ್ಲಿ ವರ್ಷಪೂರ್ತಿ ಸವಿಯಾದ ಹಲಸಿನ ಹಣ್ಣುಗಳನ್ನು ಒದಗಿಸುವ ಮೂಲಕ ಮುಡಿಪು ನಿವಾಸಿ ರೊನಾಲ್ಡ್ ಎಲ್ಲರ ಗಮನ ಸೆಳೆದಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ವಿರಾಮವಿಲ್ಲದೆ ವ್ಯಾಪಾರ ನಡೆಸುತ್ತಿರುವ ರೊನಾಲ್ಡ್, ಹಲಸಿನ ಹಣ್ಣಿನ ಸೀಸನ್ ಮುಗಿದರೂ ಗ್ರಾಹಕರಿಗೆ ನಿರಂತರವಾಗಿ ಹಣ್ಣುಗಳನ್ನು ಒದಗಿಸುತ್ತಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ ಹಾಗೂ ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಪ್ರದೇಶಗಳಿಂದ ಹಣ್ಣುಗಳನ್ನು ತರಿಸಿ ಮಾರಾಟ ಮಾಡುವುದು ಅವರ ವಿಶೇಷತೆ.

ಚಂದ್ರಬರಿಕೆ ಹಾಗೂ ಆಕರ್ಷಕ ಹಳದಿ ಬಣ್ಣದ ತೊಳೆ ಹೊಂದಿರುವ ಅತ್ಯುತ್ತಮ ರುಚಿಯ ಹಲಸಿನ ಹಣ್ಣುಗಳು ಇಲ್ಲಿ ಲಭ್ಯವಾಗುತ್ತಿವೆ. ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳನ್ನು ನೀಡುವುದು ಅವರ ವ್ಯಾಪಾರದ ಯಶಸ್ಸಿನ ಮುಖ್ಯ ಕಾರಣವಾಗಿದೆ.

“ಕಳೆದ ನಾಲ್ಕು ವರ್ಷಗಳಿಂದ ಒಂದೇ ದಿನವೂ ವಿರಾಮವಿಲ್ಲದೆ ವ್ಯಾಪಾರ ಮಾಡುತ್ತಿದ್ದೇನೆ. ಗ್ರಾಹಕರಿಗೆ ತಾಜಾ ಮತ್ತು ರುಚಿಕರ ಹಣ್ಣುಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ,” ಎಂದು ರೊನಾಲ್ಡ್ ತಿಳಿಸಿದ್ದಾರೆ.

ರಸ್ತೆ ಬದಿಯ ಈ ಸಣ್ಣ ವ್ಯಾಪಾರ ಇದೀಗ ಮಂಗಳೂರು ನಗರ ನಿವಾಸಿಗಳಿಗೆ ವರ್ಷಪೂರ್ತಿ ಹಲಸಿನ ಹಣ್ಣು ದೊರೆಯುವ ವಿಶ್ವಾಸಾರ್ಹ ತಾಣವಾಗಿ ರೂಪಾಂತರಗೊಂಡಿದೆ. ಹಲಸಿನ ಹಣ್ಣಿನ ಪ್ರಿಯರು ತಮ್ಮ ಇಷ್ಟದ ತೊಳೆಗಳನ್ನು ಆಯ್ಕೆ ಮಾಡಿಕೊಂಡು ಸವಿಯುತ್ತಿರುವುದು ನಂದಿಗುಡ್ಡೆ ರಸ್ತೆಯ ನಿತ್ಯದ ದೃಶ್ಯವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!