ಮಂಗಳೂರು: ಕನ್ನಡದಲ್ಲಿ ಶಿಕ್ಷಣ ಪಡೆದರೆ ಉದ್ಯೋಗ ಸಿಗುವುದಿಲ್ಲ ಎಂಬ ಧಾರಣೆ ಹೆಚ್ಚುತ್ತಿರುವ ಹಿನ್ನೆಲೆ ಇಂಗ್ಲಿಷ್‌ನಲ್ಲಿ ಕಲಿಯುವ ಅನಿವಾರ್ಯತೆ ನಿರ್ಮಾಣವಾಗಿದೆ. ಕನ್ನಡದಲ್ಲಿ ಕಲಿತವರಿಗೆ ಉದ್ಯೋಗಾವಕಾಶದ ಭರವಸೆ ದೊರಕಿದಾಗ ಮಾತ್ರ ಭಾಷೆಯ ಬಗ್ಗೆ ಅಭಿಮಾನ ಬೆಳೆಯಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಚಿದಂಬರ ಬೈಕಂಪಾಡಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಬುಧವಾರ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಅನಿರೀಕ್ಷಿತವಾಗಿ ದೊರೆತ ಜವಾಬ್ದಾರಿ ಆಗಿದ್ದು, ಇದರಿಂದ ನನ್ನನ್ನು ಗುರುತಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ದೊಡ್ಡತನ ಸ್ಪಷ್ಟವಾಗುತ್ತದೆ ಎಂದರು.
ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಅವರು ಬಳಿಕ ಪತ್ರಿಕಾರಂಗ ಪ್ರವೇಶಿಸಿದ ಬಗ್ಗೆ ಹೇಳಿದ ಅವರು, ಹಿಂದೆ ಸಾಹಿತಿಗಳು ಪತ್ರಿಕಾರಂಗಕ್ಕೆ ಬರುತ್ತಿದ್ದರು. ಆದರೆ ಈಗ ಆ ರೀತಿಯ ಬೆಳವಣಿಗೆ ಕಾಣಿಸುತ್ತಿಲ್ಲ ಎಂದರು. ಇಂದಿನ ಕಾಲದಲ್ಲಿ ಕಥೆ ಓದುವವರೂ, ಸುದ್ದಿ ಓದುವವರೂ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು. ಯುವ ಪತ್ರಕರ್ತರಲ್ಲಿ ಕೇಳುವ ಮನೋಭಾವ ಕಡಿಮೆಯಾಗುತ್ತಿದ್ದು, “ನಾವು ಎಲ್ಲವನ್ನೂ ತಿಳಿದವರು” ಎಂಬ ಭ್ರಮೆಯಿಂದ ಹೊರಬರಬೇಕು. ಪತ್ರಕರ್ತರು ಹೆಚ್ಚು ಅಧ್ಯಯನಶೀಲರಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಕೆ. ಆನಂದ ಶೆಟ್ಟಿ ಸನ್ಮಾನ ನೆರವೇರಿಸಿದರು.ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ ಹಾಗೂ ಪ್ರೆಸ್ ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಮೋಟುಕಾನ ಉಪಸ್ಥಿತರಿದ್ದರು.ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಲಿದಿ ಕಾರ್ಯಕ್ರಮ ನಿರೂಪಿಸಿದರು.