ಜೈಪುರ: ರಾಜಸ್ಥಾನದ ಜೈಪುರದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಖ್ಯಾತ ನಟಿ ಹಾಗೂ ರೂಪದರ್ಶಿ ಹರ್ಷಿಲ್ ಕಾಲಿಯಾ (30) ಮೃತಪಟ್ಟಿದ್ದಾರೆ.
ಸೋಮವಾರ ರಾತ್ರಿ ಶಿಪ್ರಾ ಪಾತ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ರಾತ್ರಿ ಸುಮಾರು 11:30ರ ವೇಳೆಗೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅವರ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದು ಎಡಬದಿಗೆ ಉರುಳುತ್ತಿರುವುದು ಕಾಣಿಸುತ್ತದೆ. ಘಟನೆ ನಂತರ ಸ್ಥಳೀಯರು ವಾಹನವನ್ನು ಮೇಲಕ್ಕೆತ್ತಿ ಹರ್ಷಿಲ್ ಅವರನ್ನು ಹೊರತೆಗೆದು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ತಲೆಗೆ ಗಂಭೀರ ಗಾಯಗಳಾಗಿದ್ದ ಹರ್ಷಿಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಅಪಘಾತಕ್ಕೆ ನಿಖರವಾದ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.
ಹರ್ಷಿಲ್ ಕಾಲಿಯಾ ನಟನಾ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ‘ಕ್ರೈಮ್ ನೆಕ್ಸ್ಟ್ ಡೋರ್’ ವೆಬ್ ಸರಣಿ ಹಾಗೂ ಹಲವು ರಾಜಸ್ಥಾನಿ ಹಾಡುಗಳಲ್ಲಿ ಅಭಿನಯಿಸಿದ್ದರು. ಅವರು ಸುದ್ದಿ ವಾಹಿನಿಯಲ್ಲಿ ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದರು.