ಕಾಸರಗೋಡಿನಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯೋತ್ಸವ: ಮಾರ್ಚ್ 28ರಂದು ಮಕ್ಕಳ ಕಲರವ

ಕಾಸರಗೋಡು: ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುತ್ತಾ ಬಂದಿರುವ ಕಾಸರಗೋಡು ಕನ್ನಡ ಗ್ರಾಮದಲ್ಲಿ ಮಾರ್ಚ್ 28ರಂದು ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯೋತ್ಸವ ಜರಗಲಿದೆ. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ನೇತೃತ್ವದಲ್ಲಿ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಈ ಉತ್ಸವ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಸಂಜೆ 4 ಗಂಟೆಗೆ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಸಚಿನ್ ಶ್ರಾವಣಬೆಳಗೊಳ ಉದ್ಘಾಟಿಸಲಿದ್ದು, ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಲಿದ್ದಾರೆ. ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ರಾಧಾಕೃಷ್ಣ ಕೆ. ಉಳಿಯತಡ್ಕ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪರಿಮಳ ರಾವ್ ಕೆ. ಮಂಗಳೂರು, ಸಂಜೀವ ದುಮುಕನಾಳ ಧಾರವಾಡ, ಸಿಹಾನ ಬಿ.ಎಂ ಉಳ್ಳಾಲ, ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಜಯಾನಂದ ಕುಮಾರ್ ಹೊಸದುರ್ಗ ಹಾಗೂ ಕೆ. ಗುರುಪ್ರಸಾದ್ ಕೋಟೆಕಣಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಕಾಸರಗೋಡು–ಕರ್ನಾಟಕ ಮಕ್ಕಳ ಕವಿಗೋಷ್ಠಿ ನಡೆಯಲಿದ್ದು, ಮಕ್ಕಳ ಸಾಂಸ್ಕೃತಿಕ ಉತ್ಸವವೂ ರಂಗೇರಲಿದೆ.

ಗಡಿನಾಡ ಕನ್ನಡಿತಿ ಡಾ. ವಾಣಿಶ್ರೀ ಕಾಸರಗೋಡು ಅವರ ಸಾರಥ್ಯದಲ್ಲಿ ಮಕ್ಕಳ ಸಮೂಹ ಗೀತಾ ಗಾಯನ ಹಾಗೂ ಸಂಜೀವ ದುಮುಕನಾಳ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕೆ. ಜಗದೀಶ ಕೂಡ್ಲು ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಕನ್ನಡ ಗ್ರಾಮದ ಕಾವ್ಯ ಕುಶಲ ಸ್ವಾಗತಿಸಲಿದ್ದಾರೆ. ಕೃಪಾನಿಧಿ ಮತ್ತು ಅನುಷಾ ಕಾರ್ಯಕ್ರಮ ನಿರೂಪಿಸಲಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!