ಮಂಗಳೂರು: ಹೊಸ ನಿಯಮಗಳಿಂದ ಇ-ರಿಕ್ಷಾ ಚಾಲಕರು ಸಂಕಷ್ಟದಲ್ಲಿ — ಜಿಲ್ಲಾಡಳಿತಕ್ಕೆ ಸಂಘದ ಮನವಿ

ಮಂಗಳೂರು: ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿಯ ಭಾಗವಾಗಿ ಎಲೆಕ್ಟ್ರಿಕ್ ರಿಕ್ಷಾಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ರಿಕ್ಷಾಗಳಿಗೆ ಪರ್ಯಾಯವಾಗಿ ಇ-ರಿಕ್ಷಾಗಳು ಬೆಳವಣಿಗೆಯ ಹಾದಿಯಲ್ಲಿ ಮುಂದುವರಿದವು.ಆರಂಭಿಕ ಹಂತದಲ್ಲಿ, ಆರ್‌ಟಿಓ ನಿಯಮಗಳ ಪ್ರಕಾರ ಎಲೆಕ್ಟ್ರಿಕ್ ರಿಕ್ಷಾಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಸ್ಥಳೀಯ ಸಂಸ್ಥೆಗಳ ಪರವಾನಿಗೆ (ಪರ್ಮಿಟ್) ಅಗತ್ಯವಿರಲಿಲ್ಲ. ಇದೇ ಹಿನ್ನೆಲೆದಲ್ಲಿ, ವಿಶೇಷವಾಗಿ ಕೊರೋನಾ ಕಾಲದಲ್ಲಿ ಅನೇಕ ಯುವಕರು ಮತ್ತು ಕೆಲ ಮಹಿಳೆಯರೂ ಸಹ ಇ-ರಿಕ್ಷಾಗಳನ್ನು ಖರೀದಿಸಿದ್ದರು ಆದರೆ ಜಿಲ್ಲಾಧಿಕಾರಿಗಳ ಶರತ್ತುಗಳಿಂದ ಇ-ರಿಕ್ಷಾ ಚಾಲಕರು ಸಮಸ್ಯೆಯನ್ನು ಅನುಭವಿಸುವಂತೆ ಆಗಿದೆ ಎಂದು
ಯೂತ್ ಎಲೆಕ್ಟ್ರಿಕಲ್ ಚಾಲಕ ಹಾಗೂ ಮಾಲಕರ ಸಂಘ ಇದರ ಗೌರವಧ್ಯಕ್ಷರಾದ ಲಾರೆನ್ಸ್ ಡಿಸೋಜ ತಿಳಿಸಿದರು .

ಅವರು ನಗರದ ಖಾಸಗಿ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಪೆಟ್ರೋಲ್ ಹಾಗೂ ಡೀಸೆಲ್ ರಿಕ್ಷಾಗಳ ಬೆಲೆ ಹೆಚ್ಚು, ಮೈಲೇಜ್ ಸಮಸ್ಯೆ ಹಾಗೂ ಆದಾಯ ಕಡಿಮೆ ಎಂಬ ಕಾರಣಗಳಿಂದ ಹಲವರು ಇ-ರಿಕ್ಷಾಗಳತ್ತ ಮುಖ ಮಾಡಿದರು. ಇದರಿಂದ ಜಿಲ್ಲೆಯಲ್ಲಿ ಇ-ರಿಕ್ಷಾಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಬಂದಿತು.

ಆದರೆ, ಇ-ರಿಕ್ಷಾ ಮತ್ತು ಪೆಟ್ರೋಲ್/ಡೀಸೆಲ್ ರಿಕ್ಷಾ ಮಾಲಕರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು. ಈ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಅಧ್ಯಕ್ಷತೆಯಲ್ಲಿ ಹಲವು ಹಂತಗಳಲ್ಲಿ ಸಭೆಗಳು ನಡೆದವು.ನಂತರ, 2024 ಜುಲೈ 26ರಂದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲೆಕ್ಟ್ರಿಕ್, ಮೆಥನಾಲ್ ಮತ್ತು ಎಥನಾಲ್ ಇಂಧನ ಬಳಸುವ ಆಟೋ ರಿಕ್ಷಾಗಳಿಗೆ ಮುಕ್ತ ಸಂಚಾರಕ್ಕೆ ಅನುಮತಿ ನೀಡುವ ಆದೇಶ ಹೊರಡಿಸಲಾಯಿತು ಎಂದರು .

ಆದರೆ, ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ರಿಕ್ಷಾ ಮಾಲಕರು ನ್ಯಾಯಾಲಯದ ಮೊರೆ ಹೋಗಿ ತಾತ್ಕಾಲಿಕ ತಡೆ ಆದೇಶ (ಸ್ಟೇ) ಪಡೆದರು.ಇದಾದ ಬಳಿಕ, ಪ್ರಸ್ತುತ ಜಿಲ್ಲಾಧಿಕಾರಿಗಳು ವಿಷಯದ ಕುರಿತು ಮರುಪರಿಶೀಲನೆ ನಡೆಸಿ, 2025 ಅಕ್ಟೋಬರ್ 30ರಂದು ಹಿಂದಿನ ಆದೇಶವನ್ನು ರದ್ದುಪಡಿಸಿದರು.

ನಂತರ 2025 ಡಿಸೆಂಬರ್ 6ರಂದು ಹೊಸ ಆದೇಶ ಹೊರಡಿಸಲಾಯಿತು. ಈ ಆದೇಶದ ಪ್ರಕಾರ, 2025 ಅಕ್ಟೋಬರ್ 30ರೊಳಗೆ ಇ-ರಿಕ್ಷಾ ಖರೀದಿಸಿದವರಿಗೆ ಮಾತ್ರ ಪರ್ಮಿಟ್ ನೀಡಲಾಗುವುದು ಎಂದು ತಿಳಿಸಲಾಯಿತು.

ಇದರೊಂದಿಗೆ ಐದು ಪ್ರಮುಖ ಷರತ್ತುಗಳನ್ನು ವಿಧಿಸಲಾಯಿತು: ರಿಕ್ಷಾ ಚಾಲಕರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ 5 ವರ್ಷಗಳಿಂದ ನಿವಾಸಿಯಾಗಿರಬೇಕು., ಈಗಾಗಲೇ ಪೆಟ್ರೋಲ್/ಡೀಸೆಲ್/ಸಿಎನ್‌ಜಿ ಆಟೋ ಪರವಾನಗಿ ಹೊಂದಿರುವವರಿಗೆ ಅರ್ಹತೆ ಇರುವುದಿಲ್ಲ,
ಒಬ್ಬ ವ್ಯಕ್ತಿಗೆ ಒಂದೇ ಇ-ರಿಕ್ಷಾ ಪರ್ಮಿಟ್ ಮಾತ್ರ, ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ ಮತ್ತು ಬ್ಯಾಡ್ಜ್ ಹೊಂದಿರಬೇಕು,
ಆರ್‌ಸಿ (RC) ಮಾಲಕರೇ ಸ್ವತಃ ರಿಕ್ಷಾ ಚಾಲನೆ ಮಾಡಬೇಕೆನ್ನುವ ಷರತ್ತುಗಳಿಂದಾಗಿ ಗ್ರಾಮಾಂತರ ಪ್ರದೇಶಗಳ ಹಾಗೂ ಮಂಗಳೂರು ಹೊರವಲಯದ ಅನೇಕ ಇ-ರಿಕ್ಷಾ ಚಾಲಕರು ಅರ್ಹತೆಯಿಂದ ಹೊರಗುಳಿದಿದ್ದಾರೆ. ಇವರು ಈಗಾಗಲೇ ಮಂಗಳೂರು ಆರ್‌ಟಿಓ (K19)ನಲ್ಲಿ ನೋಂದಣಿ ಮಾಡಿಕೊಂಡಿದ್ದರೂ, ಹೊಸ ನಿಯಮಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.ಈ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಜಿಲ್ಲಾಡಳಿತ ಕೈಗೊಳ್ಳಬೇಕ್ಕೆಂದು ಆಗ್ರಹಿಸಿದರು .

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವಕೀಲರಾದ ಮನುರಾಜ್ , ಸಮಿತಿಯ ಸದಸ್ಯರಾದ ಶರಣ್ , ರವಿಚಂದ್ರ , ಮಹಮ್ಮದ್ ರಿಜಾಯ್ ಸಹಿತ ಇನ್ನಿತ್ತರರು ಉಪಸ್ಥಿತರಿದ್ದರು .

SHARE
Loading spinner

One thought on “ಮಂಗಳೂರು: ಹೊಸ ನಿಯಮಗಳಿಂದ ಇ-ರಿಕ್ಷಾ ಚಾಲಕರು ಸಂಕಷ್ಟದಲ್ಲಿ — ಜಿಲ್ಲಾಡಳಿತಕ್ಕೆ ಸಂಘದ ಮನವಿ

  1. ಇದೆ ಕಾರಣಕ್ಕೆ ನಮ್ಮ ಭಾರತ ಚೈನಗಿಂತ ಹಿಂದೆ ಇದೆ ಯಾಕೆಂದರೆ ನನ್ನ ಪ್ರಕಾರ ev ಆಟೋ ರಿಕ್ಷಾ ಡ್ರೈವರಿಗೆ ಲೈಸೆನ್ಸ್ ಅಗತ್ಯ ವಿಲ್ಲ LLR ಇದ್ದರೆ ಸಾಕು ev ಆಟೋ ರಿಕ್ಷಾ ತುಂಬ ಸುಲಭ ಉದಾಹರನೆ ಮಕ್ಕಳು ಬಿಡಬಹುದು

    Loading spinner

Leave a Reply

Your email address will not be published. Required fields are marked *

error: Content is protected !!