ಕಾಸರಗೋಡು: ಕೇರಳ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಕಾವು ದಿನೇ ದಿನೇ ಹೆಚ್ಚುತ್ತಿದ್ದು, ತ್ರಿಕೋನ ಸ್ಪರ್ಧೆಯಿಂದ ಮಂಜೇಶ್ವರ ಕ್ಷೇತ್ರದಲ್ಲಿ ರಾಜಕೀಯ ಪೈಪೋಟಿ ತೀವ್ರಗೊಂಡಿದೆ. ವಿವಿಧ ರಾಜಕೀಯ ಪಕ್ಷಗಳು ತಮ್ಮ ಪ್ರಚಾರ ಕಾರ್ಯಗಳನ್ನು ವೇಗಗೊಳಿಸಿ ಮತದಾರರ ಮನಗೆಲ್ಲಲು ಹರಸಾಹಸ ಪಡುತ್ತಿವೆ.
ಈ ಹಿನ್ನೆಲೆಯಲ್ಲಿ ಮಂಜೇಶ್ವರ, ಪಾವೂರು ಮತ್ತು ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ಮಹಿಳಾ ಕಾಂಗ್ರೆಸ್ ಪ್ರಮುಖ ನಾಯಕಿ ಕೆ.ಎ. ಅಸ್ಮ ಹಸೈನಾರ್ ಭಾಗವಹಿಸಿ ಮತಯಾಚನೆ ನಡೆಸಿದರು.
ಸಭೆಗಳಲ್ಲಿ ಮಾತನಾಡಿದ ಅವರು, ಯು.ಡಿ.எಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಪ್ ಅವರ ವ್ಯಕ್ತಿತ್ವ, ಸೇವಾ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಪ್ರಶಂಸಿಸಿದರು. ಅಶ್ರಪ್ ಅವರನ್ನು “ಕೇರಳದ ಯು.ಟಿ. ಖಾದರ್” ಎಂದು ಬಣ್ಣಿಸಿದ ಅವರು, ಅವರ ಶರೀರ ಭಾಷೆ, ನಡೆ-ನುಡಿ ಹಾಗೂ ಚುರುಕುತನವು ಯು.ಟಿ. ಖಾದರ್ ಅವರನ್ನು ಹೋಲುತ್ತದೆ ಎಂದು ಅಭಿಪ್ರಾಯಪಟ್ಟರು.
ದಿನವಿಡೀ ಕ್ಷೇತ್ರದಲ್ಲಿ ಸುತ್ತಾಡುತ್ತಾ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಅಶ್ರಪ್ ಅವರ ಕಾರ್ಯಶೈಲಿ ಜನಮನ ಗೆದ್ದಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವುದು ಹಾಗೂ ನಿರಂತರವಾಗಿ ಜನಸೇವೆಯಲ್ಲಿ ತೊಡಗಿರುವುದು ಅವರ ವಿಶೇಷತೆ ಎಂದು ಹೇಳಿದರು.
ಜಾತ್ಯತೀತ ಸಿದ್ಧಾಂತವನ್ನು ಅಳವಡಿಸಿಕೊಂಡು ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವಲ್ಲಿ ಅಶ್ರಪ್ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಉತ್ತರ ಕನ್ನಡದಲ್ಲಿ ನಡೆದ ಅರ್ಜುನ್ ಪ್ರಕರಣದಲ್ಲಿ ಮೃತದೇಹ ಪತ್ತೆಗೆ ತಿಂಗಳುಗಳ ಕಾಲ ಹೋರಾಟ ನಡೆಸಿದ ಘಟನೆ ಅವರ ಹೋರಾಟ ಮನೋಭಾವವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಗಡಿಭಾಗದ ಜನರಿಗೆ ಅಗತ್ಯವಿರುವ ಸಂದರ್ಭಗಳಲ್ಲಿ ಆಸ್ಪತ್ರೆಗಳಲ್ಲಿ ನೆರವು ನೀಡುವುದು ಹಾಗೂ ಬಡ ರೋಗಿಗಳ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡುವುದು ಸೇರಿದಂತೆ ಅವರ ಮಾನವೀಯ ಗುಣಗಳನ್ನು ಅಸ್ಮ ಹಸೈನಾರ್ ವಿಶೇಷವಾಗಿ ಉಲ್ಲೇಖಿಸಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ, ಅಶ್ರಪ್ ಅವರು ಸ್ಪೀಕರ್ ಅಥವಾ ಮಂತ್ರಿ ಸ್ಥಾನವನ್ನು ಅಲಂಕರಿಸುವಂತಹ ಯೋಗ್ಯ ನಾಯಕನಾಗಲಿ ಎಂದು ಅವರು ಶುಭ ಹಾರೈಸಿದರು. ಜೊತೆಗೆ, ಕೋಮುವಾದಿ ಶಕ್ತಿಗಳ ಅಜೆಂಡಾಗೆ ಬಲಿಯಾಗದೆ ಅಭಿವೃದ್ಧಿ ಮತ್ತು ಜಾತ್ಯತೀತ ನಿಲುವು ಹೊಂದಿರುವ ಅಶ್ರಪ್ ಅವರಿಗೆ ಹೆಚ್ಚಿನ ಮತ ನೀಡಿ ಗೆಲುವು ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಕರೋಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅನ್ವರ್ ಕರೋಪಾಡಿ, ಮಹಿಳಾ ನಾಯಕಿಯರಾದ ಸವಿತಾ ಬರ್ಕಳ, ಸುಲೋಚನಾ ರೈ, ಯುವ ಕಾಂಗ್ರೆಸ್ ಮುಖಂಡ ಹಪೀಝ್ ಸಾಲೆತ್ತೂರು, ಎನ್ಎಸ್ಯುಐ ಮುಖಂಡ ಅಕ್ಮಲ್ ಮಂಗಳೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.