ಸಂದೇಹಾಸ್ಪದ ಸಾವು: ಸುದೀಪ್ ರೈ ಪ್ರಕರಣದಲ್ಲಿ ವಿಷಪ್ರಾಶನ ಆರೋಪ – ನ್ಯಾಯಕ್ಕಾಗಿ ಕುಟುಂಬದ ಆಗ್ರಹ

ಮಂಗಳೂರು/ನೆಲ್ಯಾಡಿ: ನೆಲ್ಯಾಡಿ ನಿವಾಸಿ ಸುದೀಪ್ ರೈ (31) ಅವರ ಸಂದೇಹಾಸ್ಪದ ಸಾವಿಗೆ ಸಂಬಂಧಿಸಿ ಕುಟುಂಬಸ್ಥರು ವಿಷಪ್ರಾಶನದ ಆರೋಪ ಮಾಡಿದ್ದು, ಪ್ರಕರಣದ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಮೃತರ ತಂದೆ ಬಿ. ದಾಮೋದರ, ಸುದೀಪ್ ರೈ ಅವರು ಮಾರ್ಚ್ 29ರಂದು ಮುಂಜಾನೆ ಮಂಗಳೂರಿನ ಕೊಡಿಯಾಲ್ ಬೈಲ್‌ನ ಯೆನೆಪೋಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ವೈದ್ಯರ ಪ್ರಾಥಮಿಕ ಅಭಿಪ್ರಾಯದಂತೆ, ಆಹಾರದಲ್ಲಿ ವಿಷ ಮಿಶ್ರಣವಾಗಿರುವ ಸಾಧ್ಯತೆ ಇರುವುದಾಗಿ ಸೂಚಿಸಲಾಗಿದೆ. ಮರಣೋತ್ತರ ಪರೀಕ್ಷೆ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಡೆದಿದ್ದು, ವರದಿ ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ಹೇಳಿದರು. ಮೃತ ಸುದೀಪ್ ಅವರು ಫೆಬ್ರವರಿ 17ರಂದು ಪುತ್ತೂರಿನ ಉಪ ನೋಂದಾವಣಿ ಕಚೇರಿಯಲ್ಲಿ ಕಾರ್ಕಳ ತಾಲೂಕಿನ ಸೌಮ್ಯ ಶೆಟ್ಟಿ ಅವರೊಂದಿಗೆ ರಿಜಿಸ್ಟರ್ ಮದುವೆಯಾಗಿದ್ದು, ಬಳಿಕ ಪತ್ನಿಯ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಮಾರ್ಚ್ 17ರಂದು ನೆಲ್ಯಾಡಿಯಲ್ಲಿ ಸುದೀಪ್ ಮತ್ತು ಸೌಮ್ಯ ಶೆಟ್ಟಿ ನಡುವೆ ಗಲಾಟೆ ನಡೆದಿದ್ದು, ಜೀವ ಬೆದರಿಕೆ ಹಾಕಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಾರ್ಚ್ 22ರಂದು ಅಸ್ವಸ್ಥಗೊಂಡ ಸುದೀಪ್ ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ನಂತರ ಉಡುಪಿಯ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಮಾರ್ಚ್ 24ರಂದು ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಅವರು ಮೃತಪಟ್ಟಿದ್ದಾರೆ.

ಕುಟುಂಬಸ್ಥರ ಆರೋಪದ ಪ್ರಕಾರ, ಸೌಮ್ಯ ಶೆಟ್ಟಿ ಮಾನಸಿಕ ಹಿಂಸೆ ಹಾಗೂ ಕಿರುಕುಳ ನೀಡಿ, ಆಹಾರದಲ್ಲಿ ವಿಷ ಮಿಶ್ರಣ ಮಾಡಿರುವುದೇ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಸಮಗ್ರ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇನ್ನೊಂದೆಡೆ, ಆರೋಪಿಗೆ ಹಿಂದಿನಿಂದಲೂ ವಿವಾಹವಾಗಿದ್ದು ವಿಚ್ಛೇದನ ಪಡೆದಿರುವ ಮಾಹಿತಿ ಇದ್ದು, ಈ ಹಿನ್ನೆಲೆ ಸಂಪೂರ್ಣ ವಿಚಾರಣೆಯನ್ನು ನಡೆಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಈ ನಡುವೆ ವೇಣುಗೋಪಾಲ್ ಎಂಬವರು ಮಾಧ್ಯಮಗಳ ಮುಂದೆ ಮಾತನಾಡಿ, ಸೌಮ್ಯ ಶೆಟ್ಟಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಮದುವೆ ಮಾತುಕತೆ ನಡೆದಿದ್ದುದಾಗಿ ತಿಳಿಸಿದರು. ಮದುವೆ ಸಿದ್ಧತೆಗಳೂ ನಡೆದಿದ್ದರೂ, ಅವರ ಹಿಂದಿನ ವೈವಾಹಿಕ ಜೀವನದ ಬಗ್ಗೆ ಮಾಹಿತಿ ತಿಳಿದುಬಂದ ಬಳಿಕ ಅನುಮಾನ ಉಂಟಾಗಿ ಮದುವೆಯನ್ನು ರದ್ದುಪಡಿಸಿದ್ದಾಗಿ ಹೇಳಿದ್ದಾರೆ. ಈ ಸಂಬಂಧ ವಾಗ್ವಾದಗಳು ನಡೆದಿದ್ದು, ಪೊಲೀಸ್ ಠಾಣೆಯ ಮಟ್ಟಕ್ಕೂ ವಿಚಾರ ತಲುಪಿತ್ತು ಎಂದು ಅವರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ನ್ಯಾಯ ಸಿಗಬೇಕು ಹಾಗೂ ಇಂತಹ ಘಟನೆಗಳಿಂದ ಇತರರು ಮೋಸ ಹೋಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಜೊತೆಗೆ, ಮಹಿಳೆಯರಿಗೆ ಇರುವಂತೆ ಪುರುಷರಿಗೂ ಸಮಾನ ರಕ್ಷಣಾ ವ್ಯವಸ್ಥೆ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮೃತ ಸುದೀಪ್ ರೈ ಅವರ ತಾಯಿ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!