ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಹವಾಲಾ ಹಣದ ಕಳ್ಳಸಾಗಣೆ ತೀವ್ರಗೊಳ್ಳುತ್ತಿದ್ದು, ಕಾಸರಗೋಡು ಮತ್ತು ಕುಂಬಳೆ ಪ್ರದೇಶಗಳಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಪೊಲೀಸರು ಒಟ್ಟು 72.9 ಲಕ್ಷ ರೂಪಾಯಿ ದಾಖಲೆಗಳಿಲ್ಲದೆ ವಶಪಡಿಸಿಕೊಂಡಿದ್ದಾರೆ.
ಕುಂಬಳೆಯಲ್ಲಿ 61.5 ಲಕ್ಷ ರೂಪಾಯಿ ಹಾಗೂ ಕಾಸರಗೋಡು ತಾಲೂಕು ಕಚೇರಿ ಸಮೀಪದ ಸಂಚಾರ ವೃತ್ತದ ಬಳಿ 11.40 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ.

ಕುಂಬಳೆಯ ಘಟನೆಯಲ್ಲಿ ಕಪ್ಪು ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಕಾಸರಗೋಡು ತಲಂಕರದ ಮಾಡನ್ನೂರ್ ಹೌಸ್ ನಿವಾಸಿ ಶಬೀರ್ ಬಂಧಿತನಾಗಿದ್ದಾನೆ. ಗುಪ್ತ ಮಾಹಿತಿ ಆಧಾರದಲ್ಲಿ ಜಿಲ್ಲಾ ಪೊಲೀಸ್ ಮುಖ್ಯಸ್ಥರ ದಳ ಹಾಗೂ ಕುಂಬಳೆ ಪೊಲೀಸರು ಅರಿಕ್ಕಾಡಿ ಟೋಲ್ ಬೂತ್ ಸಮೀಪ ವಾಹನ ತಪಾಸಣೆ ನಡೆಸಿದ ವೇಳೆ ಹವಾಲಾ ಹಣ ಪತ್ತೆಯಾಯಿತು.
ಕಾರಿನ ಹ್ಯಾಂಡ್ಬ್ರೇಕ್ ಭಾಗದಲ್ಲಿ ವಿಶೇಷವಾಗಿ ಸಿದ್ಧಪಡಿಸಿದ ಗುಪ್ತ ಕೊಠಡಿಯಲ್ಲಿ ಹಣವನ್ನು ಇಡಲಾಗಿತ್ತು. ಮಂಗಳೂರಿನಿಂದ ಕಾಸರಗೋಡಿನತ್ತ ಸಾಗುತ್ತಿದ್ದ ಕಾರಿನಲ್ಲಿ ಈ ಹಣವನ್ನು ಸಾಗಿಸಲಾಗುತ್ತಿತ್ತು.
ಇದೇ ವೇಳೆ, ಬೆಳಗಿನ ಜಾವ ಸುಮಾರು 2 ಗಂಟೆ ವೇಳೆಗೆ ಕಾಸರಗೋಡು ತಾಲೂಕು ಕಚೇರಿ ಸಮೀಪದ ಸಂಚಾರ ವೃತ್ತದ ಬಳಿ 11.40 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಕಾರಿನಲ್ಲಿದ್ದ ಯುವಕನಿಗೆ ಹಣದ ದಾಖಲೆಗಳನ್ನು ಕೇಳಿದಾಗ ನೀಡಲು ಸಾಧ್ಯವಾಗಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕುಂಬಳೆ ಪೊಲೀಸ್ ಇನ್ಸ್ಪೆಕ್ಟರ್ ಬೈಜು ಕೆ. ಜೋಸ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಹರೀಂದ್ರನ್, ಚಂದ್ರನ್, ಜಿನೇಶ್ ಮತ್ತು ಎಸ್ಪಿ ತಂಡವು ಸಂಯುಕ್ತವಾಗಿ ಹವಾಲಾ ವಿರೋಧಿ ಕಾರ್ಯಾಚರಣೆ ನಡೆಸಿದರು.


