ಅಜೆಕಾರು:ಅಜೆಕಾರು ಸಮೀಪದ ಶಿರ್ಲಾಲಿನ ಪಂಗ್ಲಬೆಟ್ಟು ಶ್ರೀ ಬ್ರಹ್ಮಮುಗೇರಕಲ ಕ್ಷೇತ್ರದಲ್ಲಿ ನಡೆದ ತನ್ನಿಮಾನಿಗ ನೇಮದಲ್ಲಿ ಏಳನೇ ತರಗತಿಯ ವಿದ್ಯಾರ್ಥಿಯೊಬ್ಬ ಹೆಣ್ಣು ದೈವದ ಕೋಲ ನಿರ್ವಹಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಬಾಲಕನ ದೈವ ನರ್ತನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಿರ್ಲಾಲು ಶಾಲೆಯ ಸಮರ್ಥ್ ಎಂಬ ಬಾಲಕ, ತನ್ನ ಅಜ್ಜ ಹಾಗೂ ತಂದೆಯವರಿಂದ ಬಂದಿರುವ ಪರಂಪರಾಗತ ಕಲೆಯನ್ನು ಸಣ್ಣ ವಯಸ್ಸಿನಲ್ಲೇ ಅಳವಡಿಸಿಕೊಂಡು ದೈವ ಕುಣಿತ ಪ್ರದರ್ಶಿಸಿದ್ದಾನೆ. ತಂದೆ ಹರೀಶ ಅವರ ಮಾರ್ಗದರ್ಶನದಲ್ಲಿ ಸಮರ್ಥ್ ತನ್ನಿಮಾನಿಗ ಹೆಣ್ಣು ದೈವದ ಬಣ್ಣ ಹಚ್ಚಿ ಕೋಲ ಕಟ್ಟಿದ್ದು, ಸ್ಥಳೀಯರಿಂದ ಪ್ರಶಂಸೆಗೆ ಪಾತ್ರವಾಗಿದೆ.
ತನ್ನಿಮಾನಿಗ ದೈವದ ಕೋಲಕ್ಕೆ ಸಂಬಂಧಿಸಿದಂತೆ ಹಲವು ಕಟ್ಟುಪಾಡುಗಳು ಇದ್ದು, ಕೋಲ ಕಟ್ಟುವವರು ಅವಿವಾಹಿತರಾಗಿರಬೇಕು ಎಂಬ ಸಂಪ್ರದಾಯವಿದೆ. ನಸುಕಿನ 2 ಗಂಟೆ ಸುಮಾರಿಗೆ ಆರಂಭವಾಗುವ ಈ ಕೋಲದಲ್ಲಿ ಕರಿಮಣಿ ಕಟ್ಟುವ ವಿಶಿಷ್ಟ ವಿಧಾನವೂ ಇದೆ. ಅಲ್ಲದೆ ನೇಮದ ವೇಳೆ ಹೆಣ್ಣು ದೈವಕ್ಕೆ ಮದುವೆ ಮಾಡಿಸುವ ಸಂಪ್ರದಾಯವೂ ಪಾಲಿಸಲಾಗುತ್ತದೆ.
ಹನ್ನೆರಡು ವರ್ಷದ ಈ ಬಾಲಕ ಸಂಪ್ರದಾಯಬದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ದೈವ ನರ್ತನ ಮಾಡಿರುವುದು ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿದೆ. ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬವಾಗಿರುವ ಈ ಘಟನೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗುತ್ತಿದೆ.