ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಪಾದಯಾತ್ರೆ ಭಕ್ತಿಭಾವದಿಂದ ನಡೆಯಿತು.
ಬೆಳಿಗ್ಗೆ 5 ಗಂಟೆಗೆ ಕೈಕಂಬ ಪೊಳಲಿ ದ್ವಾರದಿಂದ ಆರಂಭವಾದ ಪಾದಯಾತ್ರೆ ಸುಮಾರು 8:30ಕ್ಕೆ ದೇವಸ್ಥಾನ ತಲುಪಿತು. ಈ ಪಾದಯಾತ್ರೆ 7ನೇ ವರ್ಷದದ್ದು ಆಗಿದ್ದು, ಸುಮಾರು ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು.
ಪಾದಯಾತ್ರೆಯ ಪ್ರಮುಖ ಉದ್ದೇಶವಾಗಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸುವುದು, ಗೋಶಾಲೆ ನಿರ್ಮಾಣ, ಹಾಗೂ ಅನ್ಯಮತೀಯರಿಗೆ ವ್ಯಾಪಾರ ಅವಕಾಶ ನೀಡಬಾರದು ಎಂಬ ಬೇಡಿಕೆಗಳನ್ನು ಮುಂದಿರಿಸಲಾಗಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋಶಾಲೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದರೂ ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಮುಖಂಡರು ತಿಳಿಸಿದ್ದಾರೆ. ಇದೇ ರೀತಿ, ಕಳೆದ ಏಳು ವರ್ಷಗಳಿಂದ ವಸ್ತ್ರಸಂಹಿತೆ ಜಾರಿಗಾಗಿ ಮನವಿ ಸಲ್ಲಿಸಲಾಗುತ್ತಿದ್ದರೂ ಅದು ಇನ್ನೂ ಜಾರಿಗೆ ಬಂದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ, ಈ ಬಾರಿಯಾದರೂ ಪೊಳಲಿ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಸ್ತ್ರಸಂಹಿತೆ ಜಾರಿಗೊಳಿಸುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಯಿತು.
ಇದಕ್ಕೂ ಮೊದಲು ಸಹ ಪಾದಯಾತ್ರೆಗಳ ಮೂಲಕ ವಿವಿಧ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಕೆಲವು ಬೇಡಿಕೆಗಳು ಇನ್ನೂ ಈಡೇರಿಲ್ಲ. ಇತ್ತೀಚಿನ ಸರ್ಕಾರವು ಈ ಬೇಡಿಕೆಗಳನ್ನು ಪರಿಗಣಿಸುವುದೇ ಎಂಬುದನ್ನು ಕಾದುನೋಡಬೇಕಿದೆ ಎಂದು ಮುಖಂಡರು ಹೇಳಿದ್ದಾರೆ.


