ಉಡುಪಿ: ಕುಂದಾಪುರ ಕೋಡಿ ಬೀಚ್‌ನಲ್ಲಿ ಡ್ರೋನ್ ಕ್ಯಾಮರಾ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಘಟನೆ ನಡೆದಿದೆ. ವೀಡಿಯೊ ಚಿತ್ರೀಕರಣಕ್ಕಾಗಿ ಡ್ರೋನ್ ಹಾರಿಸುತ್ತಿದ್ದ ವೇಳೆ ಅಚಾನಕ್ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದ್ದು, ತಕ್ಷಣವೇ ಡ್ರೋನ್ ಮಾಲೀಕರು ಮುಳುಗು ತಜ್ಞ ದಿನೇಶ್ ಖಾರ್ವಿಯನ್ನು ಸಂಪರ್ಕಿಸಿದ್ದಾರೆ
ಆ ಸಂದರ್ಭದಲ್ಲಿ ದಿನೇಶ್ ಖಾರ್ವಿ ಅವರು ಮುರುಡೇಶ್ವರದಲ್ಲಿ ಕೆಲಸದ ನಿಮಿತ್ತ ಇದ್ದರೂ, ಘಟನೆಯ ತುರ್ತು ಪರಿಸ್ಥಿತಿಯನ್ನು ಗಮನಿಸಿ ಕೂಡಲೇ ಕುಂದಾಪುರಕ್ಕೆ ಆಗಮಿಸಿ, ಡ್ರೋನ್ ಬಿದ್ದಿರುವ ಸ್ಥಳದ ಮಾಹಿತಿ ಸಂಗ್ರಹಿಸಿ ಸಮುದ್ರಕ್ಕೆ ಇಳಿದು ಶೋಧ ಕಾರ್ಯ ಕೈಗೊಂಡಿದ್ದಾರೆ. ಬಳಿಕ ತಮ್ಮ ಪರಿಣತಿ ಮತ್ತು ಅನುಭವದ ನೆರವಿನಿಂದ ಅವರು ಡ್ರೋನ್ ಕ್ಯಾಮರಾವನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಮೇಲಕ್ಕೆತ್ತಿ ಸಂಬಂಧಪಟ್ಟ ವ್ಯಕ್ತಿಗೆ ಹಸ್ತಾಂತರಿಸಿದ್ದಾರೆ. ಈ ಕಾರ್ಯವನ್ನು ವೀಕ್ಷಿಸಿದ ಸಾರ್ವಜನಿಕರು ದಿನೇಶ್ ಖಾರ್ವಿ ಹಾಗೂ ಅವರ ತಂಡದ ಸೇವೆಯನ್ನು ಶ್ಲಾಘಿಸಿದ್ದಾರೆ. ಡ್ರೋನ್ ಮಾಲೀಕರೂ ಅವರ ಸಮಯೋಚಿತ ಸಹಾಯಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.