ಮಂಜೇಶ್ವರ ತಾಲೂಕಿನಾದ್ಯಂತ ಇಂದು ಬೆಳಗ್ಗೆಯಿಂದ ವಿಲೇಜ್ ಆಫೀಸ್‌ಗಳು ಹಾಗೂ ಅಕ್ಷಯ ಕೇಂದ್ರಗಳು ಸೇರಿದಂತೆ ವಿವಿಧ ಸರ್ಕಾರಿ ಸೇವೆಗಳು ಸ್ಥಗಿತಗೊಂಡು ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾದರು.
ಆನ್‌ಲೈನ್ ಪೋರ್ಟಲ್‌ಗಳು ತೆರೆಯದ ಕಾರಣ ದೂರದ ಪ್ರದೇಶಗಳಿಂದ ವಿವಿಧ ಅಗತ್ಯಗಳಿಗಾಗಿ ಬಂದ ನೂರಾರು ಜನರು ನಿರಾಶರಾಗಿ ಹಿಂತಿರುಗಬೇಕಾಯಿತು. ರೆವಿನ್ಯೂ ಇಲಾಖೆಯ ವೆಬ್‌ಸೈಟ್‌ಗಳು ಹಾಗೂ ಅಕ್ಷಯ ಕೇಂದ್ರಗಳ ಸರ್ವರ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳು, ಆರ್‌ಟಿಸಿ (ಪಹಣಿ) ಸೇರಿದಂತೆ ಪ್ರಮುಖ ದಾಖಲೆಗಳಿಗೆ ಅರ್ಜಿ ಸಲ್ಲಿಸಲು ಅಥವಾ ಪ್ರತಿಗಳನ್ನು ಪಡೆಯಲು ಸಾಧ್ಯವಾಗಲಿಲ್ಲ.
ಬೆಳಗ್ಗಿನಿಂದಲೇ ವಿಲೇಜ್ ಆಫೀಸ್‌ಗಳು ಮತ್ತು ಅಕ್ಷಯ ಕೇಂದ್ರಗಳಲ್ಲಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ವೃದ್ಧರು ಗಂಟೆಗಳ ಕಾಲ ಕಾಯುತ್ತಿದ್ದರೂ ಸೇವೆಗಳು ಪುನರಾರಂಭವಾಗದೆ ನಿರಾಶರಾದರು. “ದೂರದಿಂದ ಹಣ ಖರ್ಚು ಮಾಡಿ ಬಂದಿದ್ದೇವೆ, ಆದರೆ ದಿನವಿಡೀ ಕಾಯುತ್ತಿದ್ದರೂ ಕೆಲಸ ಆಗಲಿಲ್ಲ” ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧ ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬಂದವರ ದೊಡ್ಡ ಸಂಖ್ಯೆಯೂ ಅಕ್ಷಯ ಕೇಂದ್ರಗಳಲ್ಲಿ ಕಂಡುಬಂದಿತು. ಆದರೆ ಸೈಟ್ ತೆರೆಯದ ಕಾರಣ ಸಿಬ್ಬಂದಿಯೂ ಸಹ ಅಸಹಾಯಕರಾದರು. ಸರ್ವರ್ ಅಪ್‌ಡೇಟ್ ಅಥವಾ ನೆಟ್‌ವರ್ಕ್ ಸಮಸ್ಯೆ ಇದಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಸಮಸ್ಯೆಯನ್ನು ತಕ್ಷಣ ಪರಿಹರಿಸಿ ಆನ್‌ಲೈನ್ ಸೇವೆಗಳನ್ನು ಪುನರಾರಂಭಿಸಬೇಕೆಂದು ಸಾರ್ವಜನಿಕರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.