ಮಕ್ಕಳಿಗೆ ರಾಜ್ಯ ಮಟ್ಟದ ಬೇಸಿಗೆ ಸಾಹಿತ್ಯ ಶಿಬಿರ: ಏಪ್ರಿಲ್ 29ರಿಂದ ತುಮಕೂರಿನಲ್ಲಿ: ದಿನಾಂಕ 20-4-2026 ಪ್ರತಿನಿಧಿಗಳ ಹೆಸರು ನೋಂದಣಿಗೆ ಕೊನೆಯ ದಿನ

ಕಾಸರಗೋಡು: ಮಕ್ಕಳಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಸೃಜನಾತ್ಮಕ ಚಿಂತನೆ ಬೆಳೆಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯ ಮಟ್ಟದ ಬೇಸಿಗೆ ಸಾಹಿತ್ಯ ಶಿಬಿರವನ್ನು ಆಯೋಜಿಸಿದೆ.

ಚನ್ನರಾಯಪಟ್ಟಣದ ಪರಿಸರ ತಜ್ಞ ಸಿ.ಎನ್. ಅಶೋಕ ಅವರ ನೇತೃತ್ವದಲ್ಲಿ ಕಳೆದ 15 ವರ್ಷಗಳಿಂದ ಮಕ್ಕಳಿಗಾಗಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುತ್ತಿರುವ ಪರಿಷತ್ತು, ಈ ಬಾರಿ ತುಮಕೂರು ಜಿಲ್ಲೆಯ ಕೊರಟಗೆರೆ ಸಮೀಪದ ಸಿದ್ದರಬೆಟ್ಟದಲ್ಲಿ ಏಪ್ರಿಲ್ 29ರಿಂದ ಮೇ 2ರವರೆಗೆ ನಾಲ್ಕು ದಿನಗಳ ಶಿಬಿರವನ್ನು ನಡೆಸಲಿದೆ.

ಶಿಬಿರದಲ್ಲಿ 5ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ಪರಿಸರದ ಕುರಿತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಾಗವಹಿಸುವ ಮಕ್ಕಳಿಗೆ ಉಚಿತ ವಸತಿ, ಊಟೋಪಚಾರ ಹಾಗೂ ಪ್ರವಾಸಿ ಕೇಂದ್ರಗಳ ಭೇಟಿ ವ್ಯವಸ್ಥೆಯೂ ಕಲ್ಪಿಸಲಾಗಿದೆ.

ಈ ಶಿಬಿರಕ್ಕಾಗಿ ಕೇರಳ ರಾಜ್ಯ ಘಟಕದಿಂದ 15 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇವರಲ್ಲಿ ಒಬ್ಬರಿಗೆ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಭಾಷಣ ಮಾಡುವ ಅವಕಾಶ ದೊರೆಯಲಿದೆ. ಉಳಿದ 14 ವಿದ್ಯಾರ್ಥಿಗಳಿಗೆ ವಿಶೇಷ ಪ್ರತಿನಿಧಿಗಳಾಗಿ ಪಾಲ್ಗೊಳ್ಳುವ ಗೌರವ ಸಿಗಲಿದೆ.

ವಿದ್ಯಾರ್ಥಿಗಳೊಂದಿಗೆ ಪೋಷಕರೂ ಭಾಗವಹಿಸಬಹುದಾಗಿದ್ದು, ಕಾಸರಗೋಡಿನಿಂದ ತುಮಕೂರಿಗೆ ಹೋಗಿ ಬರುವ ಪ್ರಯಾಣ ವೆಚ್ಚವನ್ನು ತಾವೇ ಭರಿಸಬೇಕಾಗುತ್ತದೆ.

ಆಸಕ್ತ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ವಿವರಗಳು, ಸಾಧನೆಗಳ ಮಾಹಿತಿ, ಆಧಾರ್ ಪ್ರತಿ, ಫೋಟೋ ಹಾಗೂ ಮೊಬೈಲ್ ಸಂಖ್ಯೆಯನ್ನು ವಾಟ್ಸ್‌ಆಪ್ ಮೂಲಕ ಕಳುಹಿಸಿ ನೋಂದಣಿ ಮಾಡಿಕೊಳ್ಳಬಹುದು. ಮೊದಲು ನೋಂದಣಿ ಮಾಡಿದವರಿಗೆ ಆದ್ಯತೆ ನೀಡಲಾಗುವುದು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!